ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿದ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಸೇರಿದಂತೆ ಮೂತ್ರಪಿಂಡ ಕಾಯಿಲೆಗಳಿಗೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ ಹೇಳಿದ್ದಾರೆ.
ಗುರುವಾರ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞವೈದ್ಯರರ ಸೇವೆ ಲಭ್ಯವಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಆರು ಜನರಿಗೆ ಮೂತ್ರಪಿಂಡ ಕಸಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳನ್ನು ಮೂತ್ರಪಿಂಡ ಸಂಬಂದಿ ರೋಗಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಆಸ್ಪತ್ರೆಯ ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಮಾತನಾಡಿ, 40 ವರ್ಷ ಮೇಲ್ಪಟ್ಟ ಜನರು ವರ್ಷಕ್ಕೆ ಒಂದು ಬಾರಿಯಾದರು ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಆರೋಗ್ಯದ ಸ್ಥಿತಿ ಗತಿಯನ್ನು ಗುರುತಿಸಬಹುದು. ರೋಗದ ಲಕ್ಷಣಗಳು ಕಂಡುಬಂದರೆ ಪ್ರಥಮ ಹಂತದಲ್ಲಿ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಬಹುದು ಎಂದು ಶಿಬಿರದಲ್ಲಿ ಭಾಗವಹಿಸಿದ ಸಾರ್ವಜನಿಕರು, ರೋಗಿಗಳು ಹಾಗೂ ರೋಗಿಯ ಸಂಬಂಧಿಕರಿಗೆ ತಿಳಿಸಿದರು.
ಆಸ್ಪತ್ರೆಯ ನೆಫ್ರಾಲಾಜಿ ವಿಭಾಗದ ಡಾ. ಸಂದೀಪ ಪಾಟೀಲ ಮಾತನಾಡಿ, ಮೆದುಳು ನಿಷ್ಕ್ರೀಯವಾದ ರೋಗಿಗಳಿಂದ ಅಗಾಂಗ ದಾನ ಪಡೆಯಲು ಆಸ್ಪತ್ರೆಯು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದಿದೆ. ಅಂಗಾಂಗ ದಾನ ಮಾಡವವರು ಮತ್ತು ಅಂಗಾಂಗ ಅವಶ್ಯಕತೆ ಇರುವವರು ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.
ಜೀವಂತ ಕಿಡ್ನಿ ಕಸಿ ಮಾಡಿಸಿಕೊಂಡವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ವಿನಯ ಕುಂದರಗಿ, ಡಾ. ಸಂತೋಷ ಪಾಟೀಲ, ಡಾ. ಬಸವರಾಜ ಸಜ್ಜನ ಹಾಗೂ ಆಸ್ಪತ್ರೆಯ ಆಡಳಿತಾದಿಕಾರಿಗಳು ಉಪಸ್ಥಿತರಿದ್ದರು.
ಈ ಉಚಿತ ಆರೋಗ್ಯ ಶಿಬಿರದಲ್ಲಿ 115 ಜನರಿಗೆ ತಪಾಸಣೆಯನ್ನು ಮಾಡಲಾಯಿತು.

