ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹುಣಶ್ಯಾಳ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದ್ದು, ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಪಾಲಕರು, ಶಿಕ್ಷಕರು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಬುಧವಾರ ಮನವಿ ಸಲ್ಲಿಸಿದ ಶಿಕ್ಷಕರು ಹಾಗೂ ಪಾಲಕರು ಶಾಲೆಯಲ್ಲಿನ ೨೮೦ ಮಕ್ಕಳಿಗೆ ಬಿಸಿಯೂಟ ತಯಾರಿಸಲು, ಊಟದ ನಂತರ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ. ಮಕ್ಕಳು ಪಕ್ಕದ ಮನೆಗಳು, ಹೊಟೇಲ್‌ಗಳಿಗೆ ಹೋಗಿ ನೀರು ಕೇಳಿ ಕುಡಿಯುವಂತಾಗಿದೆ. ಬಿಸಿಯೂಟ ತಯಾರಿಸಲು ನೀರನ್ನು ಹೊತ್ತು ತರುವಂತಾಗಿದೆ. ಈಗ ಬೇಸಿಗೆ ಆರಂಭಗೊಡಿರುವುದರಿಂದ ಮಕ್ಕಳು ಕುಡಿಯುವ ನೀರಿನ ಸಲುವಾಗಿ ಅಲೆದಾಡುತ್ತಿದ್ದು, ದಿನನಿತ್ಯ ಮಕ್ಕಳು ಊಟ ಮಾಡಿ ತಟ್ಟೆ ತೊಳೆಯಲು ಸಂಕಷ್ಠ ಅನುಭವಿಸುವಂತಾಗಿದೆ. ಕುಡಿಯುವ ನೀರಿನ ಬಗ್ಗೆ ಈಗಾಗಲೇ ಕಳೆದ ತಿಂಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.
ಶಾಲೆಯ ಆವರಣದಲ್ಲಿನ ಬೊರೆವೆಲ್‌ನಿಂದ ಈವರೆಗೆ ಅಲ್ಪ ಸ್ವಲ್ಪ ನೀರು ಬರುತ್ತಿದ್ದು, ಇಲ್ಲಿವರೆಗೂ ಮಕ್ಕಳಿಗೆ ಕುಡಿಯಲು ಹಾಗೂ ಅಡುಗೆ ತಯಾರಿಸಲು ಯಾವುದೇ ಸಮಸ್ಯೆಯಾಗಿರಲಿಲ್ಲ, ಸದ್ಯ ಆ ಬೋರವೆಲ್ ಕೂಡಾ ಸಂಪೂರ್ಣ ಸ್ಥಗಿತಗೊಂಡಿದೆ.
ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧ್ಯಕ್ಷ, ಉಪಾಧ್ಯಕ್ಷ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಶಾಲೆಯ ಕಡೆಗೆ ಗಮನಹರಿಸಿ ಆದಷ್ಟು ಬೇಗ ಕುಡಿಯುವ ನೀರಿನ ಗಂಭೀರತೆಯನ್ನು ನೋಡಿ, ಸೂಕ್ತ ವ್ಯವಸ್ಥೆ ಮಾಡಬೇಕೆಂದು ಮುಖ್ಯಶಿಕ್ಷಕ ಮಡಿವಾಳಪ್ಪ ಹಂದಿಗನೂರ, ಹಿರಿಯ ಶಿಕ್ಷಕರಾದ ಬಾಪುಗೌಡ ಕೋಟಿಖಾನಿ, ಆರ್.ಬಿ.ಬಿರಾದಾರ, ಮಾನಪ್ಪ ಪತ್ತಾರ, ಸುಮೀತ ಮೇತ್ರಿ, ಸುರೇಶ ಭೋವಿ, ಸಂತೋಷ ಅವಳೆ, ಸದ್ದಾಮ ಗಣಿ ಸೇರಿದಂತೆ ಮಕ್ಕಳು ಅಗ್ರಹಿಸಿದ್ದಾರೆ.

