ಅಕ್ಕನ ಮನೆ ಪ್ರತಿಷ್ಠಾನ – ಸಂಸ್ಕೃತಿ ಸಂಗಮ ಕಾರ್ಯಕ್ರಮ
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ಚಿಂತಕ ಡಾ.ಶಶಿಕಾಂತ ಪಟ್ಟಣ ಅಬಿಮತ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಒಂದು ಅದ್ಭುತವಾದ ಅವಿರಳ ಮಹಿಳಾ ವಚನಕಾರ್ತಿಯರ ಕೃತಿಯನ್ನು ಲೇಖಕಿ ಹೇಮಲತಾ ಅವರು
ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ಚಿಂತಕ ಡಾ.ಶಶಿಕಾಂತ ಪಟ್ಟಣ ಶ್ಲಾಘಿದರು.
ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಇತ್ತೀಚಿಗೆ ಸಿ. ಸಿ. ಹೇಮಲತಾ -ಅಧ್ಯಕ್ಷರು -ಅಕ್ಕನ ಮನೆ ಪ್ರತಿಷ್ಠಾನ ಇವರಿಂದ ಅಕ್ಕನ ಮನೆ ಪ್ರತಿಷ್ಠಾನ ಸಂಸ್ಕೃತಿ ಸಂಗಮ – ವಿವೇಕದಿಂದ ವಿಕಾಸದೆಡೆಗೆ ಎನ್ನುವ ವೈಚಾರಿಕ ನೆಲೆ ಗಟ್ಟಿನಲ್ಲಿ ನಡೆದ ಕಾರ್ಯಕ್ರಮ, ಸಿ. ಸಿ. ಹೇಮಲತಾ ಅವರು ಬರೆದ “ವಚನಕಾರ್ತಿಯರ ಕ್ರಾಂತಿಯ ಹೆಗ್ಗುರುತು “ಕೃತಿ ಲೋಕಾರ್ಪಣೆ ಮತ್ತು “ಅಕ್ಕ ರಾಜ್ಯ ಪ್ರಶಸ್ತಿ ” ಪ್ರಧಾನ ಸಮಾರಂಭದಲ್ಲಿ ಅವರು ಹೇಮಲತಾ ಅವರ ಕೃತಿಯ ಕುರಿತು ಮಾತನಾಡಿದರು.
ಬಸವಣ್ಣನವರಿಗೆ ಅಕ್ಕನಾಗಮ್ಮ ನಿಜವಾದ ಕ್ರಾಂತಿಯ ನೆಲೆ – ಸೆಲೆಯನ್ನು ಕೊಟ್ಟವಳು. ಶರಣರು ದೇವರಿಗೆ ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಕಲಿಸಿದರು. ಶೂನ್ಯ ಸಂಪಾದನೆಯ ಸಮಯದಲ್ಲಿ ಮತ್ತು ಎರಡನೆಯ ಪ್ರೌಢದೇವ ರಾಯನ ಕಾಲಘಟ್ಟದಲ್ಲಿ ವಚನಗಳಲ್ಲಿ ಪವಾಡಗಳನ್ನು ಮತ್ತು ರಂಜನೀಯ ಕಥೆಗಳನ್ನು ಸೇರಿಸಿದ್ದು ವಿಷಾದನೀಯ ಎಂದರು.
ಆ ಕಾಲಘಟ್ಟದಲ್ಲಿ ವರ್ಣ- ವರ್ಗ ಲಿಂಗ -ಬೇಧ,ಆಶ್ರಮರಹಿತ ಸಾಂಸ್ಥಿಕರಣವಲ್ಲದ ಆಂದೋಲನವನ್ನು ವಿರೂಪ ಗೊಳಿಸುವ ಉದ್ದೇಶಪೂರ್ವಕವಾದ ಕೆಲಸವನ್ನು ಆಗಿನ ಕಾಲದ ವಿದ್ವಾoಸರು ಮಾಡಿದ್ದು ನೋವಿನ ಸಂಗತಿ ಎಂದ ಅವರು, 13 ಮತ್ತು 14ನೇ ಶತಮಾನದಲ್ಲಿ ನಾಂದೇಡದ ಗುರುಲಿಂಗಪೆದ್ದಿಯ ಐವತ್ತು ವಚನಗಳಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸಿದ್ದರ ಕುರಿತು ಅರಿವು ಮೂಡಿಸಿದರು.
ಮಹಾದೇವಿ ಅಕ್ಕ ಮತ್ತು ಬೊಂತಾದೇವಿಯವರು ದಿಗಂಬರರಾಗಿ ನಡೆದರು ಎನ್ನುವ ಸನ್ನಿವೇಶವನ್ನು ಖಡಾ ಖಂಡಿತವಾಗಿ ಅಲ್ಲಗಳೆದ ಡಾ.ಶಶಿಕಾಂತ ಪಟ್ಟಣ ಅವರು, ಇಲ್ಲಿಯವರೆಗೂ ನಾವು ಅವರನ್ನು ಬೆತ್ತಲೆಯಾಗಿ ನಡೆದು ಹೋದರು ಎನ್ನುವುದನ್ನು ಮುಂದುವರಿಸಿದ್ದೇವೆ. ವಿಚಾರವಂತರು, ಸಂಶೋಧಕರು ಅದನ್ನು ಅನುಸರಿಸುವುದು ಶುದ್ಧ ತಪ್ಪು ಎಂದರು.
ಶರಣರು ದೇಶಿಯ ಪ್ರಜ್ಞೆಯುಳ್ಳವರು, ಬಂಡಾಯ ಸಾಹಿತ್ಯದ ರೂವಾರಿಗಳು, ವೈಚಾರಿಕರು ಮತ್ತು ವೈಜ್ಞಾನಿಕ ಪರಿವೆ ಉಳ್ಳವರು ಎಂದು ಡಾ.ಪಟ್ಟಣ ಅರುಹಿದರು.
ಮೋಟಗಿ ಮಠದ ಅಥಣಿಯ ಶ್ರೀಗಳು, ಟಿ.ಎ.ನಾರಾಯಣ ಗೌಡ – ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ, ಬರಗೂರು ರಾಮಚಂದ್ರಪ್ಪ, ಡಾ.ಮುದ್ದಪ್ಪ -ಸಾಮಾಜಿಕ ಹೋರಾಟಗಾರರು ಮತ್ತು ಉದ್ಯಮಿಗಳು, ಶ್ರೀಮತಿ ಪೂಜಾ ಗಾಂಧಿ ಖ್ಯಾತ ಚಲನಚಿತ್ರ ನಟಿ, ಡಾ.ಅಶೋಕ್ ಸಂಗಪ್ಪ ಆಲೂರು ಉಪಕುಲಪತಿಗಳು ಕೊಡಗು ವಿಶ್ವವಿದ್ಯಾಲಯ, ಡಾ.ಹೇಮಲತಾ ಮಹಿಷಿ – ಖ್ಯಾತ ವಕೀಲರು ಲೇಖಕಿ, ಶ್ರೀಮತಿ ಸವಿತಕ್ಕ -ಅಂತರಾಷ್ಟ್ರೀಯ ಜಾನಪದ ಗಾಯಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡೊಳ್ಳು, ವಾದ್ಯ ನಗಾರಿ ಕುಣಿತದೊಂದಿಗೆ ಸ್ವಾಗತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಡಿನ ಪ್ರಖ್ಯಾತ ಕಲಾವಿದರಿಂದ ಜಾನಪದ ನೃತ್ಯ ಸಂಗೀತ ನಡೆಯಿತು. ಅಂತರ್ ರಾಷ್ಟ್ರೀಯ ಜಾನಪದ ಗಾಯಕಿ ಸವಿತಕ್ಕ ಅವರ ವಚನ ಗಾಯನ ಎಲ್ಲರೂ ಸವಿದರು.
ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ವಿಶ್ವಸ್ಥರು, ದತ್ತಿ ದಾಸೋಹಿಗಳು ಮತ್ತು ಆಜೀವ ಸದಸ್ಯರು ಪಾಲ್ಗೊಂಡಿದ್ದರು.

ಸಾಧಕರಿಗೆ ಗೌರವ ಸನ್ಮಾನ
ಖ್ಯಾತ ನಟಿ ಪೂಜಾ ಗಾಂಧಿ ಅವರಿಗೆ ಶರಣೆ ಬೊಂತಾದೇವಿ ಪ್ರಶಸ್ತಿ, ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಬಂದ ಅರವತ್ತಕ್ಕಿಂತ ಹೆಚ್ಚು ಶಿಕ್ಷಕರಿಗೆ ಪ್ರಶಸ್ತಿ, ಜಾನಪದ ಕಲಾವಿದರಿಗೆ ಗೌರವ, ಗಣ್ಯ ವ್ಯಕ್ತಿಗಳಿಗೆ ವಿಶೇಷ ಸನ್ಮಾನ, ವಿಶೇಷ ಆಹ್ವಾನಿತರಾಗಿ ಬಂದ ಎಲ್ಲರ ಜೊತೆ ಅಕ್ಕನ ಅರಿವು ವೇದಿಕೆಯ ವಿಶ್ವಸ್ಥರು ಶರಣೆ ಸುಧಾ ಪಾಟೀಲ, ಹಿರಿಯ ಸದಸ್ಯರು ಗೌರಮ್ಮ ನಾಶಿ, ಕಲ್ಬುರ್ಗಿಯ ಬಸಮ್ಮ ಭರಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

