ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೆಳೆ ವಿಮೆ ಜಮೆಯಾಗದ ಹಿನ್ನೆಲೆಯಲ್ಲಿ ರೈತರು ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ಗ್ರೇಡ್-೨ ತಹಶೀಲ್ದಾರ ಎಸ್.ಎಚ್.ರಾಠೋಡ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಮಂಗಳವಾರ ಆಗಮಿಸಿದ ಬಿ.ಬಿ.ಇಂಗಳಗಿ ಗ್ರಾಮದ ರೈತರು ತಮ್ಮ ಖಾತೆಗಳಿಗೆ ಜಮೆಯಾಗದೇ ಇರುವ ಬೆಳೆ ವಿಮೆಯ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತಪ್ರತಿನಿಧಿ ಸಲೀಮ್ ವಠಾರ ಮಾತನಾಡಿ, ೨೦೨೪-೨೫ ನೇ ಸಾಲಿನಲ್ಲಿ ಗ್ರಾಮ ವ್ಯಾಪ್ತಿಯ ಬಹುತೇಕ ರೈತರು ತೊಗರಿ ಬೆಳೆ ಭಿತ್ತನೆ ಮಾಡಿದ್ದರು. ಆದರೆ ನಂತರ ಬಹುತೇಕ ಬೆಳೆ ಮಳೆ ಕೊರತೆ ಹಾಗೂ ಇನ್ನಿತರ ಪ್ರಕೃತಿ ವಿಕೋಪಗಳಿಗೆ ಒಳಗಾಗಿ ಫಸಲು ಬಾರದಂತಾಯಿತು. ಆದರೆ ರೈತರು ತೊಗರಿ ಬೆಳೆಯ ವಿಮೆ ತುಂಬಿದ್ದು, ಈಗ ವಿಮೆ ಪರಿಹಾರದ ಹಣ ಕೆಲವು ರೈತರಿಗೆ ಮಾತ್ರ ಜಮೆ ಆಗಿದೆ. ಇನ್ನೂಳಿದ ರೈತರು ವಿಮೆ ಹಣ ಪಾವತಿಸಿದ್ದರು ಸಹ ಅವರಿಗೆ ಯಾವುದೇ ವಿಮೆ ಪರಿಹಾರ ಬಂದಿರುವುದಿಲ್ಲ. ಇದಕ್ಕೆ ವಿಮೆ ಕಂಪನಿಗಳೇ ನೇರ ಕಾರಣ. ಆದ್ದರಿಂದ ತಹಶೀಲ್ದಾರರು ಈ ಕುರಿತು ಕೂಡಲೇ ಬೆಳೆ ವಿಮೆ ಕಂಪನಿಯೊಂದಿಗೆ ಮಾತನಾಡಿ ವಿಮೆ ಮಾಡಿಸಿದ ರೈತರ ಎಲ್ಲ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಮನವಿ ಸಲ್ಲಿಸಿದರು.
ಲಾಲಸಾಬ್ ವಠಾರ, ಕುರ್ಬಾನ್ ದೊಡಮನಿ, ಪರಸಪ್ಪ ದಲ್ಲಾಳಿ, ಚಂದಪ್ಪ ಅಗಸರ, ಭಾಷಾಸಾಬ್ ನದಾಫ್, ಕಾಶೀಮ್‌ಅಲಿ ಆವೇರಿ, ಮಡಿವಾಳಯ್ಯ ಹಿರೇಮಠ, ಹಣಮಂತ ಮಾದರ, ಮಳಸಿದ್ದಪ್ಪ ತಡಲಗಿ, ಬಡೇಸಾಬ್ ದೊಡಮನಿ, ಸಲೀಮ್ ಕೋಲಾರ ಸೇರಿದಂತೆ ಇತರರು ಇದ್ದರು.

