ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ದರ್ಗಾದ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ಘಟಕ, ಬಸವನಬಾಗೇವಾಡಿಯ ಪಶು ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ಜಾನುವಾರು ಆರೋಗ್ಯ ಶಿಬಿರ ಜರುಗಿತು.
ಈ ಸಂದರ್ಭದಲ್ಲಿ ಬಸವನಬಾಗೇವಾಡಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಪಿ.ಎಸ್.ಸಂಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಕೃಷಿಯಲ್ಲಿ ಹಿನ್ನೆಡೆಯಾಗುತ್ತಿದೆ. ರೈತ ಬಾಂಧವರು ಕೃಷಿ ಪೂರಕವಾಗಿ ಆಡು, ಕುರಿ, ಹಸು, ಎಮ್ಮೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕುವದರಿಂದ ಹಾಲಿನ ಉತ್ಪನ್ನ ಪಡೆಯುವ ಜೊತೆಗೆ ಜಾನುವಾರು ತ್ಯಾಜ್ಯಗಳಿಂದ ಗೊಬ್ಬರ ಹತ್ತಾರು ಲಾಭಗಳನ್ನು ಪಡೆದುಕೊಳ್ಳಬಹುದು. ಪಶು ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳಿವೆ. ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಸನ್ನ ಆರ್. ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಗ್ರಾಮದ ರೈತರು, ರೈತ ಮಹಿಳೆಯರು ಧರ್ಮಸ್ಥಳ ಸಂಘಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದರು.
ಪಶು ವೈದ್ಯಾಧಿಕಾರಿಗಳಾದ ಎಂ.ಬಿ.ಕೆರೂಟಗಿ, ಆರ್.ಎಸ್.ದೇಗಿನಾಳ ಅವರು ಜಾನುವಾರುಗಳ ಆರೋಗ್ಯ ತಪಾಸಣೆ, ಗರ್ಭ ತಪಾಸಣೆ, ಇತರೆ ತಪಾಸಣೆ ಮಾಡಿ ಜಂತು ನಿವಾರಕ ಮಾತ್ರೆಗಳನ್ನು, ಮಿನರಲ್ ಮಿಕ್ಸ್, ಜಾನುವಾರುಗಳಿಗೆ ಚರ್ಮ ಗಂಟು ಕಾಯಿಲೆಗಳು ಬಾರದಂತೆ ಚುಚ್ಚುಮದ್ದನ್ನು ನೀಡಿದರು.
ಶಿಬಿರದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷೆ ಶರಣಮ್ಮ ಕುಂಬಾರ, ಧರ್ಮಸ್ಥಳ ಸಂಘದ ಕೃಷಿ ಮೇಲ್ವಿಚಾರಕ ರಾಜು ಬೆಟಗೇರಿ, ಪಶು ಆಸ್ಪತ್ರೆಯ ಪಶು ವೈದ್ಯಕೀಯ ಪರೀಕ್ಷಕ ಮಹಾದೇವಪ್ಪ ಅನ್ನಿ, ಭಾರತಿ ಕಂಬಾರ, ಸೇವಾ ಪ್ರತಿನಿಧಿ ರತ್ನ ತಾಳಿಕೋಟಿ ಇತರರು ಇದ್ದರು.

