ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಎಸ್‌ಎಸ್‌ಎಲ್‌ಸಿ ಮಕ್ಕಳು ಪರೀಕ್ಷೆಯನ್ನು ಉತ್ತಮವಾಗಿ ಬರೆಯುವುದರ ಮೂಲಕ ಉತ್ತಮ ಫಲಿತಾಂಶ ಪಡೆಯುವಂತಾಗಲಿ ಎಂದು ಶಿಕ್ಷಣ ಸಂಯೋಜಕ ಎಸ್.ಎಮ್. ಕಪನಿಂಬರಗಿ ಹೇಳಿದರು.
ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಜರುಗಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ತಮ್ಮ ಜೀವನದುದ್ದಕ್ಕೂ ನಕಲು ಮುಕ್ತ ಪರೀಕ್ಷೆ ಬರೆಯಬೇಕು. ಅದಕ್ಕಾಗಿ ಶಿಕ್ಷಕರು ಹಾಗೂ ಪಾಲಕರು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಿ.ಕೆ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದೆ. ಆದ್ದರಿಂದ ಮಕ್ಕಳು ತರಗತಿಗಳಿಗೆ ಗೈರಾಗದಂತೆ ನೋಡಿಕೊಳ್ಳುವ ಮೂಲಕ ಪಾಲಕರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಎಸ್.ಬೇವನೂರ ಮಾತನಾಡಿ, ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಬೇಕು ಎಂದರು. ಶಿಕ್ಷಕ ಜಿ.ಎಸ್.ಘತಾಟೆ ಮಾತನಾಡಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು. ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಖ್ಯಶಿಕ್ಷಕ ಆರ್.ಆರ್.ಕೋರಿ, ಶಿಕ್ಷಕರಾದ ಶಶಿಕಾಂತ ಕಠಾರೆ, ಕಾಶೀನಾಥ ಯಂಭತ್ನಾಳ, ಎಮ್.ಎನ್.ಕನ್ನೋಳ್ಳಿ, ಎಸ್.ಎಸ್. ಪಾಟೀಲ, ವೈ.ಎ.ತಾಂಬೋಳಿ, ಆರ್.ಬಿ.ಕಲಕೇರಿ, ಎಸ್.ಎಮ್. ನಧಾಫ್ ಹಾಗೂ ಮಕ್ಕಳು ಇದ್ದರು.

