ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕಾದರೆ ಮಹಿಳಾ ಸಬಲೀಕರಣ ಸಂಪೂರ್ಣವಾಗಿ ಸಾಧಿಸಲೇಬೇಕಾಗಿರುವ ಅನಿವಾರ್ಯತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಬಸಂತಿ ಮಠ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಾತೃ ಭಾರತಿ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಥಿಯಾಗಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣವೇ ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಮಹಿಳಾ ಸಬಲೀಕರಣವನ್ನು ಸಾಧಿಸಬೇಕಾದರೆ ಮಹಿಳೆ ಮೊದಲು ಶಿಕ್ಷಣ ಪಡೆದಿರಬೇಕು. ಬಾಲ್ಯ ವಿವಾಹ, ಹೆಣ್ಣು ಶಿಶು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಇತ್ಯಾದಿ ಅನಿಷ್ಟ ಪದ್ಧತಿಗಳಿಗೆ ಮಹಿಳೆಯರು ಸೊಪ್ಪು ಹಾಕಬಾರದು. ಈ ರೀತಿಯ ಸಾಮಾಜಿಕ ಪಿಡುಗು ಹೆಣ್ಣಿನ ಮೇಲೆ ನಡೆಯುತ್ತಿದ್ದಲ್ಲಿ ಸಂಘಟಿತರಾಗಿ ಮಹಿಳೆಯರು ಖಂಡಿಸಬೇಕು. ಸರಕಾರ ಸದಾ ಮಹಿಳೆಯ ಮಾನ, ಪ್ರಾಣ, ಸ್ವಾಸ್ಥ್ಯ ಗಳ ರಕ್ಷಣೆ ಮಾಡುತ್ತದೆ. ಧಾರವಾಹಿ, ಚಲನಚಿತ್ರ ಇತ್ಯಾದಿ ದೃಶ್ಯ ಮಾಧ್ಯಮಗಳಲ್ಲಿ ಬರುವ ಸಮಾಜ ಘಾತಕ ವಿಷಯಗಳಿಗೆ ಮನಸ್ಸು ಉದ್ರೇಕಗೊಳ್ಳ ಬಾರದು. ನೈಜ ಜೀವನಕ್ಕೆ ಬೇಕಾದ ಉತ್ತಮ ಅಂಶಗಳ ಚಿಂತನೆ ಮನಸ್ಸಿನಲ್ಲಿ ಇರಬೇಕು. ಮಹಿಳೆಯರಿಗೆ ಸಿಗಬೇಕಾದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ವೇಳೆ ಪಟ್ಟಣದ ಪಿಲೇಕಮ್ಮ ನಗರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯಾದ ಕವಿತಾ ಅರಳದಿನ್ನಿಯವರಿಗೆ ಆದರ್ಶ ಸಮಾಜ ಸೇವಕಿ ಪ್ರಶಸ್ತಿಯನ್ನು ಸಂಸ್ಥೆಯ ವತಿಯಿಂದ ಪ್ರದಾನ ಮಾಡಲಾಯಿತು. ಶಾಲಾ ಮಾತೆಯರು ಹಾಗೂ ಶಿಕ್ಷಕಿಯವರು ಸಾಂಸ್ಕೃತಿಕ ಕಲರವ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಮಾತೃಭಾರತಿ ಪರಿಷತ್ತಿನ ಅಧ್ಯಕ್ಷ ಶ್ರೀದೇವಿ ಪತ್ತಾರ, ಸಂಸ್ಥೆಯ ನಿರ್ದೇಶಕರುಗಳಾದ ಮೀನಾಕ್ಷಿ ಕುಲಕರ್ಣಿ, ಬಸವರಾಜ ನಾಲತವಾಡ, ಜಿ.ಜೆ.ಪಾದಗಟ್ಟಿ, ಪದಾಧಿಕಾರಿಗಳಾದ ಅಕ್ಕಮಹಾದೇವಿ ಪೂಲೇಶಿ, ರಶ್ಮಿ ತೇಲಂಗಿ, ಬಸಮ್ಮಾ ಕೆಂದೂಳಿ, ಶಾರದಾ ಗಸ್ತಿಗಾರ, ಕಾಲೇಜಿನ ಪ್ರಾಚಾರ್ಯ ಅರುಣ ಹುನಗುಂದ, ಪ್ರೌಢ ಶಾಲಾ ಪ್ರಧಾನಾಚಾರ್ಯ ರಾಮಚಂದ್ರ ಹೆಗಡೆ ಸೇರಿದಂತೆ ಇತರರು ಇದ್ದರು.
ಆಂಗ್ಯ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಗುರುಮಾತೆ ಸರಸ್ವತಿ ಮಡಿವಾಳರ್ ನಿರೂಪಿಸಿದರು. ಶಿಕ್ಷಕಿ ಅನ್ನಪೂರ್ಣ ನಾಗರಾಳ ವಂದಿಸಿದರು.

