ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪರಸ್ಥರಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅಗಲವಾದ ಕೊಡೆಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದಲ್ಲಿ ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಬೀದಿ ವ್ಯಾಪಾರಸ್ಥರಿಗೆ ಕೊಡೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ವ್ಯಾಪಾರ ಮಾಡುವುದು ಕಷ್ಟಕರ. ಅವರ ಬವಣೆ ನೋಡಲು ಅಸಾಧ್ಯ. ಈ ಬೇಸಿಗೆಯ ಬಿಸಿಲಿನ ಬೇಗೆಯಿಂದ ಸ್ವಲ್ಪವಾದರೂ ತಡೆದುಕೊಳ್ಳಲು ನೆರಳಿನ ಅವಶ್ಯಕತೆ ಬಹಳಷ್ಟಿದೆ. ಇದನ್ನು ಮನಗಂಡು ನೆರಳಿಗಾಗಿ ಕೊಡೆಗಳನ್ನು ಬೀದಿ ಬದಿ ವ್ಯಾಪಾರ ಮಾಡುವವರಿಗೆ ವಿತರಣೆ ಮಾಡಲಾಗಿದೆ ಎಂದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿ, ಶಾಸಕರು ಸಾಕಷ್ಟು ಜನಹಿತ ಕಾರ್ಯಗಳನ್ನು ರೂಪಿಸುತ್ತಿದ್ದು, ಬಡ ಜನರ ಹಿತಕಾಯುವ ಕಾರ್ಯಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುನಂದಾ ಯಂಪೂರೆ, ಎಂ.ಎ.ಖತೀಬ, ವರ್ಷಾ ಪಾಟೀಲ, ಬಸವರಾಜ ಕಾಂಬಳೆ, ಪ್ರವೀಣ ಕಂಠಿಗೊಂಡ, ರಜತ ತಾಂಬೆ, ಶಾರದಾ ಬೇಟಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ದಿ.ಎಂ.ಸಿ.ಮನಗೂಳಿ ಅವರ ಅಭಿಮಾನಿ ಬಳಗ ಹಾಗೂ ಬೀದಿ ಬದಿ ವ್ಯಾಪಾರಿಗಳು ಇದ್ದರು.

