ವಿಜಯಪುರದಲ್ಲಿ “ವಿಜಯಪುರ ಬೆಸ್ಟೀಸ್” ಸ್ನೇಹಿತೆಯರ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿದ್ದು, ಇಂದು ಎಲ್ಲ ಕ್ವೇತ್ರಗಳಲ್ಲೂ ಪುರುಷರಿಗಿಂತ ತಾನು ಕಡಿಮೆಯೇನಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ ಎಂದು ’ಉದಯರಶ್ಮಿ’ ದಿನಪತ್ರಿಕೆಯ ಪ್ರಕಾಶಕಿ ಶ್ರೀಮತಿ ಶೈಲಾ ಇಂದುಶೇಖರ ಮಣೂರ ಹೇಳಿದರು.
ಶನಿವಾರ ನಗರದ ಲೀಗ್ರ್ಯಾಂಡ್ ಹೋಟೆಲ್ ನಲ್ಲಿ “ವಿಜಯಪುರ ಬೆಸ್ಟೀಸ್” ಸ್ನೇಹಿತೆಯರ ಬಳಗ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಮಹಿಳೆಯರನ್ನು ಹಿಂದಿನಿಂದಲೂ ಈ ಸಮಾಜ ಅಬಲೆಯಂದೇ ಕಡೆಗಣಿಸಲಾಗುತ್ತಿತ್ತು. ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ ಖಂಡಿತವಾಗಿ ಅವಳಲ್ಲಿ ಅಗಾಧವಾದ ಶಕ್ತಿ ಇದೆ ಎಂದರ್ಥ ಎಂದು ಶ್ರೀಮತಿ ಶೈಲಾ ಮಣೂರ ಅಭಿಪ್ರಾಯಿಸಿದರು.
ಸೆಂಟ್ ಜೊಸೆಫ್ ಶಾಲೆಯ ಶಿಕ್ಷಕಿ ಶ್ರೀಮತಿ ಸುಮಂಗಲಾ ಬಿರಾದಾರ ಮಾತನಾಡಿ, ಸ್ತ್ರೀಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮಿಗಿಲಾಗಿ ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹೀಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿನ ಕಾಲಕ್ಕಿಂತಲೂ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಎಂದು ಹೇಳಿದರು.
ನಿವೇದಿತಾ ಬ್ಯೂಟಿ ಪಾರ್ಲರ್ ಸೌಂದರ್ಯ ತಜ್ಞೆ ಶ್ರೀಮತಿ ರೇಖಾ ಪಾಟೀಲ ಮಾತನಾಡಿ, ಕೇವಲ ಭೋಗದ ವಸ್ತುವಾಗಿದ್ದ ಈ ಸ್ತ್ರೀ ಕ್ರಮೇಣ ಅಡುಗೆ ಮನೆಗೆ ಮೀಸಲಾಗಿ ತನ್ನ ಸರ್ವಸ್ವವನ್ನೆಲ್ಲ ನಾಲ್ಕು ಗೋಡೆಗಳ ಮಧ್ಯೆಯೇ ಜೀವಿಸುತ್ತಿದ್ದವಳು ಇಂದು ಆಕಾಶದಲ್ಲಿ ಹಾರಾಡುತ್ತಿದ್ದಾಳೆ. ಗಡಿಯಲ್ಲಿ ಶತೃಗಳ ಜೊತೆ ಹೋರಾಡುತ್ತಾ ಯಾವ ಪುರುಷನಿಗೂ ಕಡಿಮೆಯಿಲ್ಲದಂತೆ ಜೀವನ ಸಾಗಿಸುತ್ತಿರುವುದು ಮಹಿಳಾ ಕುಲಕ್ಕೆ ಹೆಮ್ಮೆ ತರುವ ವಿಷಯ ಎಂದು ಹೇಳಿದರು.
ಪ್ರಗತಿಪರ ಕೃಷಿ ತಜ್ಞೆ ಸವಿತಾ ಅಗಸರ ಮಾತನಾಡಿ, ಮಾತೃಶಕ್ತಿ ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ದತಿ, ಸಂಸ್ಕೃತಿ, ಸಂಸ್ಕಾರಗಳು ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು ಕಟ್ಟುಪಾಡುಗಳು ಹಾಕಲಾಗುತ್ತದೆ. ಈ ಎಲ್ಲ ಬೇಲಿಗಳನ್ನು ದಾಟಿ ಮಹಿಳೆ ಇಂದು ಇಷ್ಟು ಯಶಸ್ವಿಯಾಗಲು ಮುಖ್ಯ ಕಾರಣ ಶಿಕ್ಷಣವಾಗಿದೆ. ಶಿಕ್ಷಣದಿಂದಲೇ ಇಂದು ಮಹಿಳೆ ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು.
ಶ್ರೀಮತಿ ಚೇತನಾ ಮಠ ಸ್ವಾಗತಿಸಿದರು. ಶ್ರೀಮತಿ ಮೀನಾ ಕುಲಕರ್ಣಿ ನಿರೂಪಿಸಿದರು. ಶ್ರೀಮತಿ ಸೋನಾ ಕುಲಕರ್ಣಿ ವಂದಿಸಿದರು.
ಕಾರ್ಯಕ್ರಮ ಬಳಿಕ ವಿಜಯಪುರ ಬೆಸ್ಟೀಸ್ ಸ್ನೇಹಿತೆಯರ ಬಳಗದ ಸದಸ್ಯರಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

” ಶಿಕ್ಷಣ ಮತ್ತು ಸಂಸ್ಕಾರದಿಂದ ಮಹಿಳೆ ಏನು ಬೇಕಾದರೂ ಮಾಡಬಹುದು ಅಂತ ನಮ್ಮ ದೇಶದ ಅನೇಕ ಮಹಾನ್ ಸಾಧಕಿಯರು
ತೋರಿಸಿಕೊಟ್ಟಿದ್ದಾರೆ. ಇವರೆಲ್ಲರ ಸಾಧನೆ ನೋಡಿದ ಮೇಲೆ ನಾವೂ ಈ ದೇಶಕ್ಕೆ, ನಾಡಿಗೆ ಏನಾದರೂ ಕೊಡುಗೆ ನೀಡಲೇಬೇಕು ಎನ್ನುವ ಪ್ರೇರಣೆ, ಮನೋಭಾವನೆ ನಮ್ಮೆಲ್ಲರಲ್ಲೂ ಮೂಡಿದಾಗ ಮಾತ್ರ ಈ ಮಹಿಳಾ ದಿನಾಚರಣೆಗೆ ಸಾರ್ಥಕತೆ ದೊರೆಯುವುದು.”
– ಶಿವದೇವಿ (ಚೆನ್ನಮ್ಮ) ವೀರಾಪೂರ
ನಿವೃತ್ತ ಎಜಿಎಂ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ಕೇಂದ್ರ ಕಚೇರಿ, ಧಾರವಾಡ

