ಮುದ್ದೇಬಿಹಾಳ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥವಾದ ಕೌಟುಂಬಿಕ ಕಲಹ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕೌಟುಂಬಿಕ ಕಲಹದಡಿ ಒಂದು ಮಗುವಿನ ಸಮೇತ ದೂರವಾಗಿದ್ದ ದಂಪತಿಯನ್ನು ಮತ್ತೆ ಒಂದುಗೂಡಿಸಿದ ಘಟನೆ ಪಟ್ಟಣದ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ ಅವರ ನೇತೃತ್ವದಲ್ಲಿ ನಡೆಯಿತು.
ಕಳೆದ ಎರಡು ವರ್ಷಗಳಿಂದ ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಇಲ್ಲಿನ ಕಿರಿಯ ಶ್ರೇಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದ ಅಡಿ ಪ್ರಕರಣ ದಾಖಲಾಗಿತ್ತು. ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ ಅವರು ದಂಪತಿ ಹಾಗೂ ಅವರ ಸಂಬಂಧಿಕರು ಮತ್ತು ವಕೀಲರೊಂದಿಗೆ ಸಮಾಲೋಚಿಸಿ ರಾಜಿ ಸಂಧಾನದ ನಡೆಸಿದರು.
ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಅನ್ಯೂನ್ಯವಾಗಿ ಜೀವನ ನಡೆಸುವದಾಗಿ ಒಪ್ಪಿದ ಕಾರಣ ಕಾನೂನು ಸೇವಾ ಸಮಿತಿಯ ವತಿಯಿಂದ ನ್ಯಾಯಾಲಯದಲ್ಲಿ ದಂಪತಿಗಳಿಗೆ ಹೂಮಾಲೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿ, ಸಿಹಿ ಹಂಚಿ ಲೋಕ್ ಅದಾಲತ್ ಕಕ್ಷಿದಾರರಿಗೆ ಸಹಕಾರಿಯಾಗಿದೆ ಎಂಬ ಸಂದೇಶವನ್ನು ಸಾರಿದರು.
ಈ ವೇಳೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ನ್ಯಾಯವಾದಿಗಳಾದ ಎನ್.ಆರ್.ಮೊಕಾಶಿ, ಎಸ್.ಸಿ.ಹಿರೇಮಠ, ಎಸ್.ಆರ್.ಜೋಗಿ, ಚೇತನ ಶಿವಶಿಂಪಿ, ಸಾಬಣ್ಣ ಚಳ್ಳಗಿ, ಎನ್.ಐ.ಕೇಸಾಪೂರ, ಎಸ್.ಎಂ.ಕಿಣಗಿ, ಪಿ.ಎ.ಹಿರೇಮಠ, ಎನ್.ಬಿ.ಮುದ್ನಾಳ, ಎಸ್.ಇ.ಹಿರೇಮಠ, ಸಂತೋಷ ಎಚ್.ಎಂ, ರೇಣುಕಾ ಪಾಟೀಲ, ಪಿ.ಬಿ.ಗೌಡರ, ಎಂ.ಎ.ಲಿಂಗಸೂರ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ ಮಹಾಂತೇಶ ಹಚರೆಡ್ಡಿ ನ್ಯಾಯಾಲಯದ ಸಿಬ್ಬಂದಿಗಳಾದ ಜ್ಯೋತಿ ಹೆಬ್ಬಾಳ, ನರ್ಮದಾ ಮರೋಳ, ನಾಗು ಮದಿಹಳ್ಳಿ, ಸಿದ್ದು ಸಂಕಿನ್, ಇಸಾಕ ಒಂಟಿ ಸೇರಿದಂತೆ ಇತರರು ಇದ್ದರು.
“ಕೆಲಸ ಕಾರ್ಯಗಳ ಒತ್ತಡದಲ್ಲಿ ನ್ಯಾಯಾಲಯಕ್ಕೆ ಅಲೆದು ಸಾಕಾಗಿ ಹೋಗಿತ್ತು. ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಳಗಿಡದ ಅವರ ತಿಳುವಳಿಕೆಯ ಮಾತುಗಳಿಂದ ನಾನು ಮತ್ತು ನನ್ನ ಪತ್ನಿ ಮತ್ತೆ ಒಂದಾಗಿದ್ದೇವೆ. ಇನ್ನು ಮುಂದೆ ನಾವು ಅನ್ಯೂನ್ಯವಾಗಿ ಬಾಳ್ವೆ ಮಾಡುತ್ತೇವೆ. ಲೋಕ್‌ಅದಾಲತ್ ನಮಗೆ ಸಹಕಾರಿಯಾಗಿದೆ.”
– ನಾಮದೇವ ರಾಠೋಡ
ಪಕ್ಷಗಾರ
“ಲೋಕ್‌ಅದಾಲತ್ ನಿಂದ ಪಕ್ಷಗಾರರಿಗೆ ಅನೂಕೂಲವಾಗಲಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವ ಪಕ್ಷಗಾರರು ಪ್ರತೀ ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್ ನಲ್ಲಿ ನಿಮ್ಮ ವಕೀಲರ ಮುಖಾಂತರ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಭೇಟಿಯಾಗುವ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಯಾವುದೇ ಶುಲ್ಕ ಭರಿಸುವ ಅವಶ್ಯತೆ ಇಲ್ಲ.”
– ಚೇತನ ಶಿವಶಿಂಪಿ
ವಕೀಲರು.
ನನ್ನ ಪತಿ ಹಾಗೂ ಅವರ ಮನೆಯವರಿಂದ ಕೌಟುಂಬಿಕ ದೌರ್ಜನ್ಯವಾಗಿದೆ, ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಕಳೆದ ಎರಡು ವರ್ಷಗಳ ಹಿಂದೆ ನನ್ನಲ್ಲಿ ನೊಂದ ಮಹಿಳೆ ಕೇಳಿಕೊಂಡಿದ್ದರು. ಅವರ ಪರವಾಗಿ ನಾನು ಕೇಸ್ ದಾಖಲಿಸಿದ್ದೆ. ಅದರ ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಪತಿಗಳಿಗೆ ತಿಳುವಳಿಕೆ ಹೇಳಿ ರಾಜಿ ಸಂಧಾನದ ಮೂಲಕ ದಂಪತಿಗಳನ್ನು ಒಂದುಗೂಡಿಸಿದ್ದಾರೆ.”
– ಎಸ್.ಸಿ.ಹಿರೇಮಠ
ವಕೀಲರು

