ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಪೈಕಿ ನೇರ ನಿಷ್ಠುರ ವಚನಗಳಿಂದ ಹೆಸರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರದ್ದು ಸಮ ಸಮಾಜ ಕಟ್ಟುವಲ್ಲಿ ಬಹಳ ದೊಡ್ಡ ಪಾತ್ರವಿತ್ತು ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.
ಅಫಜಲಪುರ ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿ ಕೋಲಿ ಸಮಾಜದ ವತಿಯಿಂದ ನಡೆದ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತಿ ಹಾಗೂ ಪುರಸಭೆ ಸದಸ್ಯೆ ಅಪರ್ಣ ದತ್ತು ದೇವರನಾವದಗಿ ಅವರ ಅನುದಾನದಲ್ಲಿ ನಿರ್ಮಿಸಿರುವ ಚೌಡಯ್ಯನವರ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು ಇದು ನನ್ನ ಕೊನೆಯ ಚುನಾವಣಾ ರಾಜಕಾರಣವಾಗಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ, ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಲಿದ್ದೇನೆ. ಆದರೆ ಬದುಕಿರುವಷ್ಟು ವರ್ಷವು ಜನಸೇವೆ ಮಾಡಲಿದ್ದೇನೆ ಎಂದ ಅವರು ಕೋಲಿ ಸಮಾಜದ ಸಂಘಟನೆ, ಏಳಿಗೆಗಾಗಿ ದಿ. ವಿಠ್ಠಲ್ ಹೇರೂರ ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಸಮಾಜ ಸಾಕಷ್ಟು ಅಭಿವೃದ್ದಿ ದಿಸೆಯಲ್ಲಿ ಸಾಗುತ್ತಿದೆ. ಆದರೂ ಪಟ್ಟಣದಲ್ಲಿ ಸಮಾಜಕ್ಕೆ ಅನುದಾನ ಕೇಳಿದ್ದೀರಿ, ಕಳೆದ ಬಾರಿ ೫೦ ಲಕ್ಷ ನೀಡುವುದಾಗಿ ತಿಳಿಸಿದ್ದೆ. ಕಾರಣಾಂತರಗಳಿಂದ ಅದು ನಿಂತಿತ್ತು. ಆದಷ್ಟು ಬೇಗ ಅನುದಾನ ಮೀಸಲಿಡುವ ಕೆಲಸ ಮಾಡಲಿದ್ದೇನೆ ಎಂದರು.
ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜ ಒಗ್ಗಟ್ಟಾದರೆ ಮಾತ್ರ ನಮ್ಮ ಬೇಡಿಕೆಗಳು ಈಡೆರಲು ಸಾಧ್ಯವಿದೆ. ಕೋಲಿ ಸಮಾಜ ಎಸ್‌ಟಿಗೆ ಸೇರಬೇಕೆಂದು ನಡೆದ ಹೋರಾಟಕ್ಕೆ ಸೂಕ್ತ ನ್ಯಾಯ ಸಿಗುವ ಕಾಲ ಸನ್ನಿಹಿತವಾಗಿದೆ. ದಿ. ವಿಠ್ಠಲ್ ಹೇರೂರ ಅವರ ಕರ್ಮಭೂಮಿಯಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡುವುದಕ್ಕಾಗಿ ನಾನು ಮತ್ತು ಶಾಸಕ ಎಂ.ವೈ ಪಾಟೀಲ್ ಅವರು ಸೇರಿ ೨ ಕೋಟಿ ಅನುದಾನ ನೀಡುತ್ತೇವೆ. ಅಲ್ಲದೆ ಮುಂಬರುವ ಜಿ.ಪಂ ತಾ.ಪಂ ಚುನಾವಣೆಗಳಲ್ಲಿ ಸಮಾಜದ ಯುವ ಮುಖಂಡರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಸಕ ಎಂ.ವೈ ಪಾಟೀಲ್ ಅವರಿಗೆ ಮನವಿ ಮಾಡುತ್ತೇನೆ ಎಂದರು.
ಕೋಲಿ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಸರ್ಕಾರ ನಮ್ಮ ಸಮಾಜವನ್ನು ಸಂಪೂರ್ಣವಾಗಿ ಎಸ್‌ಟಿ ಮೀಸಲಿನಡಿ ಸೇರ್ಪಡೆ ಮಾಡಬೇಕು. ತಳವಾರ ಮಿಸಲಾತಿ ನೀಡಿದ್ದರೂ ಕೂಡ ಅನೇಕ ಕಡೆ ನ್ಯೂನ್ಯತೆಗಳಿಂದಾಗಿ ನಮ್ಮ ಸಮಾಜದ ಜನ ಮಿಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಶಾಸಕರು ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚೌಡದಾನಪುರದ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು, ಅಫಜಲಪುರ ಸಂಸ್ಥಾನ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅದ್ಯಕ್ಷ ಮಹಾರಾಯ ಅಗಸಿ, ಕೆಪಿಸಿಸಿ ಸದಸ್ಯರಾದ ಅರುಣಕುಮಾರ ಪಾಟೀಲ್, ಪಪ್ಪು ಪಟೇಲ್, ಪ್ರಮುಖರಾದ ಶರಣಪ್ಪ ಮಾನೆಗಾರ, ಬಸವರಾಜ ಸಪ್ಪನಗೋಳ, ಶಿವಶರಣ ಕೋಬಾಳ, ರಮೇಶ ನಾಟಿಕಾರ, ಮಹಾಂತೇಶ ಬಡದಾಳ, ದುಂಡು ಜಮಾದಾರ, ಶಂಕು ಮ್ಯಾಕೇರಿ, ವಿದ್ಯಾಧರ ಮಂಗಳೂರೆ, ರಾಜಕುಮಾರ ಉಕ್ಕಲಿ, ಸಿದ್ದಪ್ಪ ಸಿನ್ನೂರ, ಸಿದ್ದಾರ್ಥ ಬಸರಿಗಿಡ, ಬಸು ನಿಂಬರ್ಗಿ, ದತ್ತು ದೇವರನಾವದಗಿ, ಸೈದಪ್ಪ ಕರಿಕಲ್, ಬಿ.ಎಂ ರಾವ್, ರಮೇಶ ಪೂಜಾರಿ, ದೇವಿಂದ್ರ ಜಮಾದಾರ, ಶ್ರೀಕಾಂತ ದೀವಾನಜಿ, ಲಕ್ಷ್ಮಿಪುತ್ರ ಜಮಾದಾರ, ಮಹಾಂತೇಶ ತಳವಾರ ಆನೂರ, ಬಸವರಾಜ ಹೇರೂರ ಸೇರಿದಂತೆ ಅನೇಕರು ಇದ್ದರು.

