ಮುದ್ದೇಬಿಹಾಳ: ಮತದಾನ ಸಮೀಪಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಅಭ್ಯರ್ಥಿ ಎ.ಎಸ್.ಪಾಟೀಲರ ವರ್ತನೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂಥದ್ದಾಗಿದೆ. ಸರ್ಕಾರದ ಎಲ್ಲ ರಂಗಗಳನ್ನು ದುರುಪಯೋಗ ಮಾಡಿಕೊಂಡು, ನಮ್ಮ ಸಭೆಗಳಿಗೆ ಅಡ್ಡಿಯುಂಟು ಮಾಡುವುದರ ಜೊತೆಗೆ ಎಲ್ಲ ಕಡೆಗಳಲ್ಲಿ ಹಣ – ಹೆಂಡ ಹಂಚುತ್ತಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಸೋಲುವ ಭೀತಿಯಿಂದ ನಮ್ಮ ಬೆಂಬಲಿತ ಇಬ್ಬರು ವ್ಯಾಪಾರಸ್ಥರ ಮೇಲೆ ಐಟಿ ರೇಡ್ ಮಾಡಿಸಿ ಭಯ ಹುಟ್ಟಿಸುವುದಲ್ಲದೇ ಪುಡಾರಿಗಳಿಗೆ ಶೆರೆ ಕುಡಿಸಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಮೇಲೆ ಗಲಾಟೆ ನಡೆಸಲು ಪ್ರಚೋದನೆ ನೀಡುತ್ತಿದ್ದಾರೆ. ಇಂತಹ ಬೆದರಿಕೆಗೆ ಇಲ್ಲಿ ಭಯ ಪಡುವವರು ಯಾರೂ ಇಲ್ಲ. ಇವರ ಬಳಿ ಅಕ್ರಮದ ಹಣ ಎಲ್ಲಿಂದ ಬಂದಿದೆ? ಮೊದಲು ಇವರ ಮನೆಯ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಬೇಕು. ಲಕ್ಷಗಟ್ಟಲೇ ಸೀರೆ ಹಂಚಿದ ಬಗ್ಗೆ ಇವರೇ ಹೇಳಿದ್ದಾರೆ. ಇದೆಲ್ಲ ಮಾಡೋಕೆ ಇವರಿಗೆ ದುಡ್ಡು ಎಲ್ಲಿಂದ ಬಂತು? ೪೦೦ ಕೋಟಿ ವ್ಯವಹಾರ ಇರುವದಾಗಿ ಹೇಳಿ ಅಫಿಡೆವಿಟ್ ನಲ್ಲಿ ೮೫ ಲಕ್ಷ ತೋರಿಸುತ್ತಾರೆ. ಇದರ ಬಗ್ಗೆ ಐಟಿ ಅಧಿಕಾರಿಗಳು ಸ್ವಯಂ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಗೋವಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಸಿದ್ದಣ್ಣ ಮೇಟಿ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment