ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಗ್ರಾಮೀಣರ ಮಕ್ಕಳ ಪಾಲನೆಯ ಹೊಣೆಯನ್ನು ಸರ್ಕಾರ ಹೊತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಸಂತೋಷ ಹರಿಜನ ಹೇಳಿದರು.
ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಕೂಸಿನ ಮನೆಯ ಗ್ರಾಮ ಪಂಚಾಯತಿ ಮಟ್ಟದ ಮೇಲ್ವೀಚಾರಣಾ ಸಮಿತಿ ಸದಸ್ಯರಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾದ ಕೂಸಿನ ಮನೆಗಳು ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿವೆ. ಕೆಲಸ ಅರಿಸಿ ಮನರೇಗಾ ಯೋಜನೆಯ ಕಾಮಗಾರಿಯಲ್ಲಿ ಅಥವಾ ಇನ್ನಿತ್ತರೇ ಕೆಲಸದಲ್ಲಿ ತೊಡಗಿಕೊಳ್ಳುವ ಗ್ರಾಮೀಣ ಭಾಗದ ಕೂಲಿಕಾರರ ಮಕ್ಕಳ ಪಾಲನೆ-ಪೋಷಣೆಯನ್ನು ಈ ಯೋಜನೆಯ ಮೂಲಕ ತನ್ನ ಮಡಿಲಿಗೆ ಹಾಕಿಕೊಂಡಿದೆ. ಇದರಿಂದ ಸಹಸ್ರಾರು ಪಾಲಕರು ಮಕ್ಕಳ ಆರೈಕೆಯ ಚಿಂತಿಯಿಲ್ಲದೆ ಕೆಲಸದಲ್ಲಿ ತೊಡಗಿದ್ದಾರೆ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಅವರು ಮಾತನಾಡಿ, ತಿಕೋಟಾ ತಾಲೂಕಿನಾದ್ಯಂತ ೧೦ ಕೂಸಿನ ಮನೆಗಳು ಮಂಜೂರಾಗಿದ್ದು ಸರಕಾರದ ನಿರ್ದೇಶನದಂತೆ ಎಲ್ಲಾ ಕೇಂದ್ರಗಳನ್ನು ಆರಂಭ ಮಾಡಲಾಗಿದೆ. ಮತ್ತು ಕೇಂದ್ರದ ಆರೈಕೆದಾರರು ಸಮೀಕ್ಷೆ ಮಾಡಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದರು. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಈ ಕೇಂದ್ರಗಳಲ್ಲಿ ದಾಖಲು ಮಾಡಿಕೊಳ್ಳಲು ಎಲ್ಲ ಆರೈಕೆದಾರರು. ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು, ಅಧಿಕಾರಿಗಳು ಮುಂದಾಗಬೇಕು ಎಂದರು.
ಕೂಸಿನ ಮನೆಯಲ್ಲಿ ಯಾವದೇ ರೀತಿಯ ಸಮಸ್ಯೆಗಳಾಗದಂತೆ ಮಕ್ಕಳಿಗೆ ತುಂಬಾ ಆಕರ್ಷಣಿಯವಾಗುವಂತೆ ನಿರ್ವಹಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಪಂ.ರಾ) ಶ್ರೀಮತಿ ಶೋಭಕ್ಕ ಶಿಳೀನ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತರಬೇತಿದಾರರಾದ ವಿಜಯಾ ಗಲಗಲಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರೇಣುಕಾ ಸೋಲಾಪುರ, ವಿ.ಎಸ್.ನಾಯಿಕ, ಎಸ್‌ಐಆರ್‌ಡಿ ವಿಷಯ ನಿರ್ವಾಹಕರಾದ ಕವಿತಾ ಬಿರಾದಾರ ಸೇರಿದಂತೆ ಇತರರು ಹಾಜರಿದ್ದರು.

