ಮೊಯ್ಲಿ, ಮತ್ಯಾರೋ ಹೇಳಿದ್ರೆ ಯಾರೂ ಸಿಎಂ ಅಗಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಈ ಬಗ್ಗೆ ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ ಎಂದರು.
ಮೊಯ್ಲಿ ಅಥವಾ ಮತ್ಯಾರೋ ಹೇಳೋದ್ರಿಂದ ಯಾರೂ ಮುಖ್ಯಮಂತ್ರಿ ಅಗಲ್ಲ, ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಗುತ್ತಿದಾರರ ಬಾಕಿ ಬಿಲ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಬಾಕಿಯಿರುವ ಮೊತ್ತಗಳ ಪಾವತಿಗೆ ಗುತ್ತಿಗೆದಾರರ ಸಂಘ ಮನವಿ ಮಾಡಿದ್ದು, ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು, ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ಲುಗಳು ಹೆಚ್ಚಿವೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮಟ್ಟದಲ್ಲಿ ಕಮೀಷನ್ ದಂಧೆ ನಡೆದಿರುವುದಾಗಿ ಗುತ್ತಿಗೆ ಸಂಘದವರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಸಹ ಅಪರಾಧ. ಈ ರೀತಿಯ ಕೃತ್ಯದಲ್ಲಿ ಯಾರು ತೊಡಗಬಾರದು. ನಾನು ಇದುವರೆವಿಗೂ ಹಣಬಿಡುಗಡೆ ಮಾಡಲು ಯಾರಿಂದಲೂ ದುಡ್ಡು ಪಡೆದಿಲ್ಲ ಎಂದು ಹೇಳಿದರು.

“ಹಿಂದಿನ ಬಿಜೆಪಿ ಸರ್ಕಾರದವರು ಬಜೆಟ್ ನಲ್ಲಿ ಅನುದಾದ ಇಡದೆ ಬೇಕಾಬಿಟ್ಟಿ ಟೆಂಡರ್ ಕರೆದು, ಕೆಲಸ ಆರಂಭಿಸಿ, ಗುತ್ತಿಗೆದಾರರಿಗೆ ಬಿಲ್ ಹಣ ನೀಡದೆ ಸುಮಾರು ರೂ.30,000 ಕೋಟಿ ಬಾಕಿ ಮೊತ್ತವನ್ನು ನಮ್ಮ ಸರ್ಕಾರದ ತಲೆಯ ಮೇಲೆ ಹೊರಿಸಿ ಹೋಗಿದ್ದಾರೆ. ಇದಕ್ಕೆ ಯಾರು ಹೊಣೆ?”
– ಸಿದ್ದರಾಮಯ್ಯ
ಮುಖ್ಯಮಂತ್ರಿ

ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಲು ಡಿಕೆಶಿ ನಿರಾಕರಣೆ
ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸೋಮವಾರ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮೊಯ್ಲಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರು ಹೇಳಿರುವುದಕ್ಕೆ ನಾನು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲ್ಲ ಎಂದರು.
ನಾಯಕತ್ವ ಬದಲಾವಣೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಸೂಚನೆಗಳನ್ನು ನಾನು ಪಾಲಿಸುತ್ತಿದ್ದೇನೆ ಎಂದರು.

