ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ನಡೆದಿದೆ. ರಾಜ್ಯದ ಜನತೆ ಬದುಕು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುಲು ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀಶೈಲ ಕವಲಗಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪುವಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಈ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಮಾತನಾಡಿ, ಇಲಾಖೆಯಿಂದ ೨೭೨ ಪ್ರಕರಣಗಳು ಪೂರ್ಣಗೊಳಿಸಲಾಗಿದೆ. ೯ಪ್ರಕರಣ ಬಾಕಿಯಿವೆ. ಅವುಗಳನ್ನು ಈ ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಐಟಿ, ಜಿಎಸ್‌ಟಿ, ಹೊ ರೇಷನ್ ಕಾರ್ಡ್, ಆಧಾರ ಲಿಂಕ್ ಇಲ್ಲದೇ ಇರುವ ಒಟ್ಟು ೯ಅರ್ಜಿಗಳು ಬಾಕಿ ಉಳಿದಿವೆ. ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಮಹಿಳೆಯರು ಹೂವಿನ ವ್ಯಾಪಾರ, ಚಹಾ ಅಂಗಡಿ, ಕಿರಾಣಿ ಅಂಗಡಿ, ಹೈನುಗಾರಿಕೆಗಳಂತಹ ಕಾರ್ಯಗಳಿಗೆ ಬಳಿಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಈ ವೇಳೆ ಸದಸ್ಯೆ ಸುನಂದಾ ಯಂಪೂರೆ ಮಾತನಾಡಿ, ಇಲ್ಲಿಯವರೆಗೆ ಅನೇಕ ಪ್ರಗತಿ ಪರಿಶೀಲನಾ ಸಭೆಗಳು ಜರುಗಿವೆ. ಪ್ರತಿ ಬಾರಿಯೂ ಎಲ್ಲ ಹಳ್ಳಿಗಳಲ್ಲಿ ಸರಿಯಾಗಿ ಅಕ್ಕಿ ಹಂಚಿಕೆಯಾಗುತ್ತಿಲ್ಲ. ಹಾಗೂ ಕೆಲವೇ ದಿನಗಳ ಅವಧಿಯಲ್ಲಿ ಮಾತ್ರ ಅಕ್ಕಿ ವಿತರಣೆ ಮಾಡುತ್ತಾರೆ. ಸರಿಯಾಗಿ ಸೂಚನಾ ಫಲಕ ಅಳವಡಿಸಿರುವದಿಲ್ಲ. ಆದ್ದರಿಂದ ಸರಕಾರದ ಆದೇಶದಂತೆ ೩೦ದಿನಗಳು ಸಹ ವಿತರಣೆ ಮಾಡಬೇಕು. ಆದರೆ ನ್ಯಾಯಬೆಲೆ ಅಂಗಡಿಕಾರರು ಮಾತ್ರ ಕಾಟಾಚಾರಕ್ಕೆ ಎರಡು ಮೂರು ದಿನಗಳ ಕಾಲ ಮಾತ್ರ ಹಂಚಿಕೆ ಮಾಡುತ್ತಿದ್ದಾರೆ. ಈ ಕುರಿತು ಪ್ರತಿ ಸಭೆಯಲ್ಲಿ ಅಧಿಕಾರಿಗಳಿಗೆ ನ್ಯಾಯಬೆಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು ಇಲಾಖೆಯ ಅಧಿಕಾರಿಗಳು ಭೇಟಿ ನೀಡದೆ ಸಭೆಯಲ್ಲಿ ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಶರಣಬಸಪ್ಪ ಖಾನಾಪುರ, ರವೀಂದ್ರ ನಾಟೀಕಾರ ಹಾಗೂ ಮಹಮ್ಮದರಜತ ತಾಂಬೆ ಮಾತನಾಡಿ, ಆಹಾರ ಇಲಾಖೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಈ ತಿಂಗಳು ೧೫ರೊಳಗಾಗಿ ನ್ಯಾಯಬೆಲೆ ಅಂಗಡಿಕಾರ ಸಭೆ ಕರೆಯಬೇಕು. ಇದಕ್ಕೆ ಪ್ರತಿಯಾಗಿ ಸದಸ್ಯರು ಆರಂಭವಾಗಿ ಎಷ್ಟು ದಿನಗಳು ಕಳೆದಿವೆ ಆದರೆ ನಿರೀಕ್ಷೆಗಗಿಂತ ನೋಂದಣಿ ಆಗದೆ ಇರುವುದು ಬೇಸರದ ಸಂಗತಿ. ಆದ್ದರಿಂದ ಗ್ರಾಮಗಳಲ್ಲಿ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಾರಿಗೆ ಶಾಖಾ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಮಾತನಾಡಿ, ಶಕ್ತಿ ಯೋಜನೆ ೧೦೭ರಲ್ಲಿ ೧೦೨ ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಮಹಿಳಾ ಪ್ರಯಾಣಿಕರು ೩೭,೬೬,೨೧೧ ರೂ.ಗಳು ಜೀರೋ ಟಿಕೆಟ್‌ಲ್ಲಿ ದಾಖಲಾಗಿವೆ. ತಾಲೂಕಿನಲ್ಲಿ ೯ಹಳ್ಳಿಗಳಿಗೆ ಬಸ್ ಸಂಚಾರ ಇರಲಿಲ್ಲ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಹೊಸದಾಗಿ ಬಸ್‌ಗಳು ಸಂಚರಿಸುತ್ತಿವೆ ಎಂದರು.
ಈ ವೇಳೆ ತಾಪಂ ಇಒ ರಾಮು ಅಗ್ನಿ, ಸದಸ್ಯರಾದ ಶಿವಾನಂದ ಹಡಪದ, ಮೋಹಸಿನ್ ಬೀಳಗಿ, ರುದ್ರಗೌಡ ಪಾಟೀಲ್, ಪರಶುರಾಮ ಗೌಂಡಿ, ಸಿದ್ದಲಿಂಗಪ್ಪ ಗುಂಡಾಪುರ, ಸಿದ್ರಾಮಪ್ಪ ಕಲ್ಲೂರ, ಶರಣಗೌಡ ಬಿರಾದಾರ ಸೇರಿದಂತೆ ಅನೇಕರಿದ್ದರು.

