ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕಲಾಪೋಷಕರಾಗಿದ್ದ ದಿ. ಭೋಜಣ್ಣ ಬೀಳಗಿಯವರಿಗೆ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಭಾನುವಾರ ದಿನಾಂಕ ೨-೩-೨೦೨೫ರಂದು ಸಂಜೆ ಕಂದಗಲ ಶ್ರೀ ಹನುಮಂತರಾಯ್ ರಮಗಮಂದಿರದಲ್ಲಿ ಸ್ವರ ಶ್ರದ್ದಾಂಜಲಿಯನ್ನು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಮೂಲಕ ಸಲಿಸಿದ್ದು ನಿಜಕ್ಕು ಶ್ಲಾಘನೀಯ ಕಾರ್ಯಕ್ರಮವೆಂದು ಧಾರವಾಡದ ಸುಪ್ರಸಿದ್ಧ ಗಾಯಕ ಪಂ. ಕೈವಲ್ಯ ಕುಮಾರ್ ಗುರವ್ ತಿಳಿಸಿದರು.
ಕಳೆದ ೫೦ ವರ್ಷಗಳಿಂದ ವಿಜಯಪುರದಲ್ಲಿ ಅನೇಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗಿದೆ ದೇಶದ ಅಸಂಖ್ಯ ಖ್ಯಾತನಾಮ ಸಂಗೀತಗಾರರನ್ನು ಸುರಸಿಂಗಾರ ಸಂಸ್ಥೆಯ ಮೂಲಕ ವಿಜಯಪುರದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಪಂ. ಕೈವಲ್ಯ ಕುಮಾರ್ ಹಾಗೂ ಡಾ. ಸತೀಶ ಜಿಗಜಿನ್ನಿ ಮಾತನಾಡಿದರು.
ನಂತರದಲ್ಲಿ ಪಂ. ಕೈವಲ್ಯ ಕುಮಾರ್ ಗುರವ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಪಂಡಿತ್ ಕೈವಲ್ಯ ಕುಮಾರ್ ಗುರವ್ ಅವರು ರಾಗ ಶ್ರೀ ವಿಸ್ತಾರವಾಗಿ ಪ್ರಸ್ತುತಪಡಿಸಿ ನಂತರ ವಚನ ತಿಲಕಮೋದರಾಗ ಹೋಳಿ ಗೀತೆಗಳನ್ನು ಪ್ರಸ್ತುತಪಡಿಸುವುದರ ಮೂಲಕ ತಮ್ಮ ವಿದ್ಯುತ್ ಪೂರ್ಣ ಗಾಯನವನ್ನು ಪ್ರದರ್ಶಿಸಿದರು. ಇವರಿಗೆ ಪಂಡಿತ್ ಶ್ರೀಧರ್ ಮಾಂಡ್ರೆ ಅವರು ತಬಲ ಸಾತ್ ಮತ್ತು ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂ ಸಾಥನ್ನು ಸಮರ್ಥವಾಗಿ ನೀಡಿ ಸುಮಾರು ೨-೩೦ ಗಂಟೆಗಳ ಕಾಲ ಸಂಗೀತದ ರಸದೌತಣವನ್ನು ಊಣಬಡಿಸಿದರು.
ಕಾರ್ಯಕ್ರಮದಲ್ಲಿ ಕಮ್ಮತಗಿಯ ಆರ್ ಎಸ್ ಲಕ್ಕದ, ಸಿದ್ದರಾಮಪ್ಪ ಕಡ್ಲಿಮಟ್ಟಿ, ಡಾ. ಸತೀಶ್ ಜಿಗಜಿನ್ನಿ, ಪದಾಧೀಕಾರಿಗಳಾದ ಡಾ. ಶಿರಗುಪ್ಪಿ, ಸಂಗಣ್ಣ ಪಾಟೀಲ್, ಡಾ. ವಿಷ್ಣು ಶಿಂಧೆ, ಅರುಣ ಸೊಲ್ಲಾಪುರಕರ, ಡಾ.ಹರಿಶ ಹೆಗಡೆ, ತ್ರೀವೇಣಿ ಬೀಳಗಿ, ಕಲಾವಿದ ರಮೇಶ್ ಚವ್ಹಾಣ, ಸಂಜೀವ್ ಕಡ್ಲಿಮಟ್ಟಿ, ಐಶ್ವರ್ಯ ಬೀಳಗಿ ಸಹಿತ ವಿಜಯಪುರದ ಸಂಗಿತಗಾರರು, ಕಲಾಸಕ್ತರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿಸಿದರು.
ಡಾ.ಹರಿಶ ಹೆಗಡೆಯವರು ನಿರೂಪಿಸಿದರು. ಡಾ. ವಿಷ್ಣು ಶಿಂದೆ ವಂದಿಸಿದರು

