ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇರಳ ಮಾದರಿಯಲ್ಲಿ ಎಂ.ಎಸ್.ಐ.ಎಲ್ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ತಾಲೂಕಿನ ಹೊನಗನಹಳ್ಳಿಯಲ್ಲಿ ಶನಿವಾರ ಮುಸ್ಸಂಜೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗಿರುವ ಸಂಜೀವಿನಿ (ಎನ್.ಆರ್.ಎಲ್. ಎಂ.) ಘಟಕದ ಉದ್ಘಾಟನೆ, ಗ್ರಾಮ ಪಂಚಾಯತಿಯ ಕಟ್ಟಡಕ್ಕೆ ಅಡಿಗಲ್ಲು ಹಾಗೂ ಸಿ.ಎಸ್.ಆರ್ ಯೋಜನೆಯಡಿಯಲ ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಮಿಳುನಾಡು ಮತ್ತು ಕೇರಳಗಳಲ್ಲಿ ಚಿಟಫಂಡ್ ವ್ಯವಸ್ಥೆ ಬಹಳ ಯಶಸ್ವಿಯಾಗಿದೆ. ಕೇರಳದಲ್ಲಿ ಸುಮಾರು ರೂ. 25000 ಕೋ. ಗಿಂತಲೂ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಅದೇ ರೀತಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಂ.ಎಸ್.ಐ.ಎ ಮೂಲಕ ಚಿಟಫಂಡ್ ವ್ಯವಸ್ಥೆ ಜಾರಿ ಮಾಡುವ ಮೂಲಕ ಸ್ವಸಹಾಯ ಗುಂಪುಗಳಿಗೆ ಶಕ್ತಿ ತುಂಬಲು ಚಿಂತನೆ ನಡೆದಿದೆ. ಪಿಗ್ಮಿ ಏಜೆಂಟರ ರೀತಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಇದರಿಂದ ಉದ್ಯೋಗ ಸಿಗಲಿದೆ. ಇದರಿಂದ ಗೃಹಲಕ್ಷ್ಮಿ ಯೋಜನೆ ಹಣವೂ ಸದುಪಯೋಗವಾಗಲಿದೆ. ಸರಕಾರವೇ ಇದನ್ನು ನಡೆಸುವುದರಿಂದ ಜನರಿಗೆ ವಿಶ್ವಾಸ ಹೆಚ್ಚಲಿದ್ದು, ಸರಕಾರದ ಶ್ರೀರಕ್ಷೆಯೂ ಈ ಯೋಜನೆಗೆ ಇರಲಿದೆ. ಅಷ್ಟೇ ಅಲ್ಲ, ಹಣವೂ ಸುರಕ್ಷಿತವಾಗಿರುತ್ತದೆ. ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ ತೊರವಿ, ಅತಾಲಟ್ಟಿ, ಕಣಮುಚನಾಳ, ತೊನಶ್ಯಾಳ, ಹೊನಗನಹಳ್ಳಿ, ಸವನಹಳ್ಳಿಗೆ ನೀರಾವರಿ ಒದಗಿಸಲಾಗುವುದು. ಎರಡ್ಮೂರು ವರ್ಷಗಳಲ್ಲಿ ಈ ಭಾಗದಲ್ಲಿ ನೀರಾವರಿಯಾಗಲಿದೆ. ಶೀಘ್ರದಲ್ಲಿ 2ನೇ ಪ್ಯಾಕೆಜ್ ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲು, ಸಿಎಂ ಮತ್ತು ನೀರಾವರಿ ಸಚಿವ, ಡಿಸಿಎಂ ಅವರಿಗೆ ಮನವಿ ಮಾಡಲಾಗುವುದು. ಈಗಾಗಲೇ ಜಾಕವೆಲ್ ಕೆಲಸ ಪ್ರಾರಂಭವಾಗಿದೆ ಎಂದು ಸಚಿವರು ತಿಳಿಸಿದರು.
ರೂ. 1 ಕೋ. ವೆಚ್ಚದಲ್ಲಿ ಹೊನಗನಹಳ್ಳಿ- ದದಾಮಟ್ಟಿ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಸವನಹಳ್ಳಿ- ಹಿಟ್ನಳ್ಳಿ ಕಾಮಗಾರಿ ಮುಕ್ತಾಯವಾಗಿದೆ. ಹೊನಗನಹಳ್ಳಿ- ಸನವಹಳ್ಳಿ ರಸ್ತೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಹೊನಗನಹಳ್ಳಿ- ಸವನಹಳ್ಳಿ ಅಂಡರಪಾಸ್ ಸೇತುವೆಗೆ ರೂ. 80 ಲಕ್ಷ ನೀಡಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ನಮ್ಮ ಮತಕ್ಷೇತ್ರದ ಶಾಲೆಗಳಿಗೆ ಕಟ್ಟಡ ನೀಡಲು ಸಿ.ಎಸ್.ಆರ್ ನಲ್ಲಿ ಮುಂದಿನ ಆರು ತಿಂಗಳಲ್ಲಿ ಶಾಲೆಗಳ ರೂಂ, ಡೆಸ್ಕ್, ಶೌಚಾಲಯ ಸೇರಿದಂತೆ ಸಕಲ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಮತಕ್ಷೇತ್ರದಲ್ಲಿ ಶಾಲೆಗಳ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಅದರಂತೆ ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ. ಕಾರಜೋಳ ಬಳಿ ಒಂದು ಭಾವಿ ತೆರೆದು ರೂ. 2.10 ಕೋ. ವೆಚ್ಚದಲ್ಲಿ ಕೆಲಸ ನಡೆದಿದ್ದು, ಹೊನಗನಹಳ್ಳಿ, ಸವನಹಳ್ಳಿ, ತೊನಶ್ಯಾಳಕ್ಕೆ ನೀರು ಪೂರೈಕೆಯಾಗಲಿದೆ. ಈ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬಿಸಿಲಿನ ತಾಪಮಾನ ಎದುರಿಸಲು ತಯಾರಿ ನಡೆಸಲು ಹಾಗೂ ಕುಡಿಯಲು ನೀರು ಪೂರೈಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಫಾಕ್ಸಕಾನ್ ಕಂಪನಿಯಿಂದ ಬೆಂಗಳೂರಿನಲ್ಲಿ 50 ಸಾವಿರ ನೌಕರಿ ಕೊಡುತ್ತಿದ್ದು, ನಮ್ಮ ಜಿಲ್ಲೆಗೆ ಬಂದು ಉದ್ಯೋಗ ಮೇಳ ನಡೆಸಲು ಮತ್ತು ಈ ಮೂಲಕ ಇನ್ನೂ 15-20 ಕಂಪನಿಗಳನ್ನು ಕರೆಯಿಸಿ ನಮ್ಮ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲುವ ಗುರಿ ಇದೆ. ನೀರಾವರಿ ಬಳಿಕ ಜಿಲ್ಲೆಯಲ್ಲಿ ಔದ್ಯೋಗಿಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಜಯಪುರ ಜಿಲ್ಲೆಯನ್ನು ರಾಜ್ಯದಲ್ಲಿಯೇ ನಂಬರ್ ಒನ್ ಜಿಲ್ಲೆಯನ್ನು ಮಾಡಲು ಗುರಿ ಹೊಂದಿದ್ದೇನೆ. ಈಗಾಗಲೇ ರೂ. 42 ಸಾವಿರ ಕೋ. ಬಂಡವಾಳ ಹೂಡಿಕೆಯಾಗಲಿದೆ. 5000 ಜನರಿಗೆ ಉದ್ಯೋಗ ಸೃಷ್ಠಿಗೆ ಅನುಕೂಲವಾಗಲಿದೆ. ಇಲ್ಲಿನ ಶಾಲೆಗಳಿಗೆ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಛೆ ಮಾಡಲಾಗುವುದು. 8, 9 10ನೇ ತರಗತಿಗಳಿಗೆ ಡಿಜಿಟಲ್ ಕ್ಸಾಸರೂಂ ಕೊಡಲಾಗವುದು. ನನ್ನ ಅವಧಿಯಲ್ಲಿ ಬರುವ 200-300 ಕೋ. ಸಿ. ಎಸ್. ಆರ್. ಫಂಡನ್ನು ಶಾಲೆಗಳ ಮೂಲಭೂತ ಸೌಕರ್ಯ ಒದಗಿಸಲು ಬಳಕೆ. ಈಗಾಗಲೇ ಎಲ್ಲ ಶಾಲೆಗಳ ಪರಿಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ಪಡೆಯಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ. ಕಾರಜೋಳ ಬಳಿ ಒಂದು ಭಾವಿ ತೆರೆದು ರೂ. 2.10 ಕೋ. ವೆಚ್ಚದಲ್ಲಿ ಕೆಲಸ ನಡೆದಿದ್ದು, ಹೊನಗನಹಳ್ಳಿ, ಸವನಹಳ್ಳಿ, ತೊನಶ್ಯಾಳಕ್ಕೆ ನೀರು ಪೂರೈಕೆಯಾಗಲಿದೆ. ಈ ಬೇಸಿಗೆಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ ಅವರು, ನೀರಾವರಿ ಬಳಿಕ ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಕ್ರಾಂತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಜಯಪುರವನ್ನು ರಾಜ್ಯದಲ್ಲಿಯೇ ನಂಬರ್ ಒನ್ ಜಿಲ್ಲೆಯನ್ನು ಮಾಡಲು ಗುರಿ ಹೊಂದಿದ್ದೇನೆ. ಈಗಾಗಲೇ ರೂ. 42 ಸಾವಿರ ಕೋ. ಬಂಡವಾಳ ಹೂಡಿಕೆಯಾಗಲಿದೆ. 5000 ಜನರಿಗೆ ಉದ್ಯೋಗ ಸೃಷ್ಠಿಗೆ ಅನುಕೂಲವಾಗಲಿದೆ.
ಗ್ರಾಮಸ್ಥರಿಗೆ ಅನುಕೂಲವಾಗಿದ್ದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಈಗ ನೌಕರಿ ಕಳೆದುಕೊಂಡಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ಸಚಿವನಾಗಿ ಚಿಂತನೆ ಮಾಡಲಾಗುವುದು ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ರಾ. ಪಂ. ಅಧ್ಯಕ್ಷ ನಚಿಕೇತನ ಅಶೋಕ ಬಿದರಿ, ಉಪಾಧ್ಯಕ್ಷ ರಮೇಶ ಭೀಮಪ್ಪ ಕಾಂಬಳೆ, ಮುಖಂಡರಾದ ಎ.್ ಬಿ. ಶಿರೋಳ, ಶಶಿಧರ ಬಿದರಿ, ವಿಠ್ಠಲಗೌಡ ಆರ್. ಬಿರಾದಾರ, ಮಲ್ಲಪ್ಪ ಕಾಳಪ್ಪಗೋಳ, ರಾವುತಪ್ಪ ಸಂ. ಗಾಣಿಗೇರ, ಲಕ್ಷ್ಮಣ ಪೂಜಾರಿ, ಮಲ್ಲಿಕಾರ್ಜುನ ಹಳ್ಳಿ, ಜಿ. ಪಂ. ಮುಖ್ಯ ಯೋಜನಾಧಿಕಾರಿ ಎನ್. ಕೆ. ಗೋಠೆ, ಬಬಲೇಶ್ವರ ತಾ. ಪಂ. ಇಓ ಜೆ. ಎಸ್. ಪಠಾಣ, ಗ್ರಾ. ಪಂ. ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

