ನಗರ ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ನಾಡಗೌಡ ಕರೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬೆಳೆಯುವ ನಗರಕ್ಕೆ ಸಂಚಾರದ ವ್ಯವಸ್ಥೆ ಇಲ್ಲದಿದ್ದರೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ದೂರದೃಷ್ಟಿಯಿಂದ ಪಟ್ಟಣದಲ್ಲಿ ಸಿಟಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಧ್ಯಕ್ಕೆ ಎರಡು ಬಸ್‌ಗಳನ್ನು ಪ್ರಾರಂಭಿಸಿದ್ದು ಮಾರುತಿ ನಗರದ ಕೊನೆಯ ರಸ್ತೆಯಿಂದ ಪ್ರಾರಂಭವಾಗಿ ಜಾನುವಾರಗಳ ಮಾರುಕಟ್ಟೆ, ರಿಲಯನ್ಸ್ ಪೆಟ್ರೋಲ್ ಪಂಪ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಪಿಲೇಕಮ್ಮ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಪದ್ಮಾವತಿ ಮಾರ್ಗವಾಗಿ ಹಡಲಗೇರಿ ಗ್ರಾಮಕ್ಕೆ ಒಂದು ಮತ್ತೊಂದು ಬಸ್ ವಿಮುಖವಾಗಿ ಹೀಗೆ ಒಟ್ಟು ಎರಡು ಸಿಟಿ ಬಸ್‌ಗಳು ಪ್ರಾರಂಭವಾಗಿವೆ. ಈ ಬಸ್ ಸೇವೆ ಪ್ರಾರಂಭಕ್ಕೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಘಟಕ ವ್ಯವಸ್ಥಾಪಕರು ಶ್ರಮಿಸಿದ್ದು ಅವರಿಗೆ ಅಭಿನಂದಿಸುತ್ತೇನೆ ಎಂದರು.
ಘಟಕ ವ್ಯವಸ್ಥಾಪಕ ಎ.ಎಚ್.ಮಧಬಾವಿ ಮಾತನಾಡಿ ಶಾಸಕರ ಒತ್ತಾಯ ಮತ್ತು ಪ್ರಯಾಣಿಕರ ಬೇಡಿಕೆಯಂತೆ ಇಂದಿನಿಂದ ಎರಡು ಬಸ್‌ಗಳನ್ನು ಪ್ರಾರಂಭಿಸಿದ್ದೇವೆ. ಬಸ್ ನಿಲ್ದಾಣದಿಂದ ಮಧ್ಯದಲ್ಲಿ ಇಳಿಯುವ ಪ್ರಯಾಣಿಕರಿಗೆ ರೂ.೬ ಮತ್ತು ಕೊನೆಯ ಸ್ಟಾಪ್ ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರೂ.೧೨ ರಂತೆ ದರ ನಿಗದಿ ಪಡಿಸಿದ್ದೇವೆ. ಈ ಎರಡೂ ಬಸ್‌ಗಳಿಂದ ನೀರೀಕ್ಷಿತ ಆದಾಯ ಬಂದಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಸ್‌ಗಳ ಸೇವೆಯನ್ನು ನೀಡಲಿದ್ದೇವೆ ಎಂದರು.
ಈ ವೇಳೆ ನಗರಾಭಿವೃದ್ಧಿ ಹೋರಾಟ ಯುವ ವೇದಿಕೆಯ ಸಂಚಾಲಕ ಬಸವರಾಜ ನಂದಿಕೇಶ್ವರಮಠ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಪದಾಧಿಕಾರಿಗಳಾದ ಲಕ್ಷ್ಮಣ ರಾಠೋಡ, ಬುಡ್ಡೇಸಾ ಚಪ್ಪರಬಂದ, ವಾಯ್.ಎಚ್.ವಿಜಯಕರ, ಪಿಂಟು ಸಾಲಿಮನಿ, ಸಂಗಣ್ಣ ಮೇಲಿನಮನಿ, ಹಣಮಂತ ಕುರಿ, ಸಂಗು ಚಲವಾದಿ, ಸರಸ್ವತಿ ಪೀರಾಪೂರ, ಸುಜಾತಾ ಸಿಂಧೆ, ರಾಮಣ್ಣ ರಾಜನಾಳ, ರಾಜು ನಾಯಕ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಶಹಜಾದಬಿ ಹುಣಚಗಿ, ಸಹನಾ ಬಡಿಗೇರ, ರಫೀಕ ದ್ರಾಕ್ಷಿ, ವಿರೇಶ ಹಡಲಗೇರಿ, ನಾಮ ನಿರ್ದೇಶಿತ ಸದಸ್ಯ ಹರೀಶ ಬೆವೂರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್.ಐ.ಹಿರೇಮಠ, ಪ್ರಮುಖರಾದ ಶೋಭಾ ಶಳ್ಳಗಿ, ಗಿರಿಜಾ ಕಡಿ, ಸಂಗಣ್ಣ ಬಿರಾದಾರ(ಜಿಟಿಸಿ) ಸೇರಿದಂತೆ ಹಲವರು ಇದ್ದರು.

