ಅನಧಿಕೃತ ಸಂಘ ಸಂಸ್ಥೆಗಳು, ನಕಲಿ ಪತ್ರಕರ್ತರು ಹಾಗೂ ಯೂ-ಟ್ಯೂಬ್ ಚಾನಲ್ ನವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿರುವವರನ್ನು ವಿರೋಧಿಸಿ ಜಿಲ್ಲಾ ನೌಕರರ ಸಂಘ ಹಾಗೂ ವಿವಿಧ ವೃಂದ ಸಂಘಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಜಿಪಂ ಮುಖ್ಯಕಾರ್ಯನಿರ್ವಾಹ ಅಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಹೆಚ್ಚುವರಿ ಎಸ್ಪಿ ಅವರಿಗೆ ಶನಿವಾರ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸೇವೆಯನ್ನು ಪಡೆಯುವುದಕ್ಕಾಗಿ ಆಸಕ್ತ ಏಜನ್ಸಿಯವರನ್ನು ಆಯ್ಕೆ ಮಾಡುವುದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-2000 ರನ್ವಯ ಟೆಂಡರ್ ಪ್ರಕ್ರಿಯೆ ಜುರುಗಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದರಂತೆ 2024-25 ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ಕರೆಯಲಾಗಿದ್ದ ಇ-ಪ್ರೋಕ್ಯೂರಮೆಂಟ್ ಟೆಂಡರಗಳಲ್ಲಿ ಹಲವಾರು ಏಜನ್ಸಿಯವರು ಭಾಗವಹಿಸಿರುತ್ತಾರೆ. ಮೇ|| ಚಿಕ್ಕಲಕಿ ಎಂಟರ್‌ಪ್ರೈಜಸ್ ವಿಜಯಪುರ ಇವರು ಅಪಲೋಡ್ ಮಾಡಿರುವ ದಾಖಲೆಗಳು ಅಪೂರ್ಣವಿರುವುದರಿಂದ ಸದರಿ ಏಜನ್ಸಿಯವರು ಭಾಗವಹಿಸಿದ ಬಹುತೇಕ ಟೆಂಡರ್‌ಗಳ ತಾಂತ್ರಿಕ ಬಿಡ್‌ನಲ್ಲಿ ತಿರಸ್ಕೃತರಾಗಿರುತ್ತಾರೆ. ಈ ಕಾರಣಕ್ಕಾಗಿ ಚಿಕ್ಕಲಕಿ ಎಂಟರ್‌ಪ್ರೈಜಸ್ ವಿಜಯಪುರ ಇವರು ಜಿಲ್ಲೆಯ 10 ಜನ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ವೈಯಕ್ತಿಕ ಹಗೆತನ ಸಾಧಿಸಿ ಅವರ ತೇಜೊವಧೆ ಮಾಡುವುದಕ್ಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮ ಜ್ಯೋತಿ) ಬೆಂಗಳೂರು ಇವರ ಹೆಸರಿನಲ್ಲಿ,10 ಜನ ಅಧಿಕಾರಿ/ಸಿಬ್ಬಂದಿಗಳು ದಲಿತ ವಿರೋಧಿಗಳು ಅಂತಾ ಬಿತ್ತಿ ಪತ್ರಗಳನ್ನು ಮುದ್ರಿಸಿ ವಿಜಯಪುರ ನಗರದ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ ಅಂಟಿಸಿ ಉಲ್ಲಂಘನೆ ಮಾಡಿರುತ್ತಾರೆ. ಇದರಿಂದಾಗಿ ಅಧಿಕಾರಿ/ನೌಕರರು ನಿರ್ಭಿತರಾಗಿ ಕೆಲಸ ನಿರ್ವಹಿಸುವುದು ಕಷ್ಠ ಸಾಧ್ಯವಾಗುತ್ತಿದೆ, ಹಾಗೂ ಸದರಿಯವರು ಮಾತೆತ್ತಿದರೆ ನಾನು ದಲಿತ ನೀವೆಲ್ಲ ಸರ್ಕಾರಿ ನೌಕರರು ದಲಿತ ವಿರೋಧಿಗಳು ನಿಮ್ಮ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತೇನೆ ಅಂತಾ ಹೆದರಿಸುವುದು ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.
ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತಿ ದೇವರ ಹಿಪ್ಪರಗಿ, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತಿ ಸಿಂದಗಿ ಮುಂತಾದ ಅನೇಕ ಕಚೇರಿಗಳಲ್ಲಿಯೂ ಸಹ ಇದೇ ರೀತಿಯ ವರ್ತನೆ ತೋರಿ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುವುದು, ಜಾತಿ ನಿಂದನೆ ಮೊಕದ್ದಮೆ ದಾಖಲಿಸುತ್ತೇನೆ ಅಂತಾ ಹೆದರಿಸುವುದು, ದಬ್ಬಾಳಿಕೆ ಮಾಡುವುದು ಕೂಡಾ ಮಾಡಿರುತ್ತಾನೆ. ಈತನ ಭಯದಿಂದ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಭಯದಲ್ಲಿ ಕೆಲಸ ಮಾಡುವಂತಾಗಿದೆ. ಕಾರಣ ಸದರಿ ಚಿಕ್ಕಲಕಿ ಎಂಟರ್‌ಪ್ರೈಜಸ್ ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಇದರ ಮಾಲೀಕರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮುಂದುವರೆದು ಸದರಿಯವರು ಮಾರ್ಚ 06 ರಂದು ಜಿಲ್ಲಾ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಕರಪತ್ರಗಳನ್ನು ಮುದ್ರಿಸಿ ವಿಜಯಪುರ ನಗರದ ತುಂಬಾ ಅಂಟಿಸಿರುತ್ತಾರೆ. ಕಾರಣ ಸದರಿಯವರು ನಡೆಸಲಿರುವ ಮುಷ್ಕರ/ಮುತ್ತಿಗೆಗೆ ಯಾವದೇ ತೆರನಾದ ಅನುಮತಿ ನೀಡಬಾರದೆಂದು ವಿನಂತಿಸುತ್ತೇವೆ.
ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ದಿನಂಪ್ರತಿ ನಡೆಯುತ್ತಿರುವುದು, ನಕಲಿ ಪತ್ರಕರ್ತರ/ಯೂ-ಟ್ಯೂಬ್ ಚಾನಲ್ ನವರ ಕಿರುಕುಳ, ಮಾಹಿತಿ ಹಕ್ಕು ಕಾರ್ಯಕರ್ತ ರೆಂದು ಹೇಳಿ ನೌಕರರಿಗೆ ಮಾನಸಿಕ ಕಿರುಕುಳ ನೀಡುವುದು ಹಾಗೂ ನೌಕರರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನೌಕರರು ಮಾನಸಿಕ ಸ್ಥೈರ್ಯ ಕುಗ್ಗಿ ಸರ್ಕಾರಿ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಆದ್ದರಿಂದ ಅನಧಿಕೃತ ಸಂಘ ಸಂಸ್ಥೆಗಳು, ನಕಲಿ ಪತ್ರಕರ್ತರು ಹಾಗೂ ಯೂ-ಟ್ಯೂಬ್ ಚಾನಲ್ ನವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜುಬೇರ್ ಕೆರೂರ, ವಿಜಯಕುಮಾರ್ ಹತ್ತಿ, ರಾಜಶೇಖರ್ ದೈವಾಡಿ, ಶಿವರಾಜ್ ಬಿರಾದಾರ್, ವಿಶ್ವನಾಥ್ ಬೆಳ್ಳನವರ್, ಗಂಗಾಧರ್ ಜೇವರ್. ನಿಜು ಮೇಲಿನಕೇರಿ, ಗೋಂಗಡಿ ಸರ್, ದಸರತ ಸಲರಕರ, ತೇರದಾಳ ಸರ್, ಗಣೇಶ್ ಡೊಬ್ಳೆ, ಬಶೀರ ನದಾಫ, ಹಂಚಿನಾಳ್ ಸರ್, ನೌಕರ ಸಂಘದ ಹಾಗೂ ವೃಂದ ಸಂಘಗಳ ಎಲ್ಲ ಪದಾಧಿಕಾರಿಗಳು, ಗಣಪತಿ ಭಾಣಿಕೋಲ ಡಿ.ಎಸ್.ಎಸ್ ಸಂಘದ ಮುಖಂಡರು, ವಿಜಯಕುಮಾರ ಮೆಕ್ಕಳಕಿ (ಆಯುಕ್ತರು ಮಹಾನಗರ ಪಾಲಿಕೆ), ಶೀವಾನಂದ ಮಾಸ್ತಿಹೋಳಿ ಜಿಲ್ಲಾ ಶಸ್ತ್ರ ಚಿಕಿತ್ಸಕರು, ವಿಜಯಕುಮಾರ ಆಜೂರ, ಉಪ ಕಾರ್ಯದರ್ಶಿಗಳು ಜಿ ಪಂ ವಿಜಯಪುರ, ಸಂಪತ್ ಗುಣಾರಿ ಜಿಲ್ಲಾ ಆರೋಗ್ಯಾಧಿಕಾರಿಗಳು,
ಶ್ರೀಮತಿ ಭಾರತಿ ಚಲವಯ್ಯಾ ಇಓ ತಾ.ಪಂ ದೇವರಹಿಪ್ಪರಗಿ, ದೀಪಕ ಉಪ ನಿರ್ದೇಶಕರು ಬಿಸಿಎಂ,
ಪುಂಡಲಿಕ ಮಾನವರ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಚವ್ಹಾಣ, ಸಿದ್ದರಾಜು, ಕೆ. ಕೆ. ಚವ್ಹಾಣ, ಶ್ರೀಮತಿ ಕೊಲ್ಹಾರ ಡಿಡಿಪಿಐ ವಿ.ಸಿ ನಂದಿಕೋಲ, ವಿವೇಕಾನಂದ ಹುಟಗಿಕರ, ಬಸವರಾಜ ತಡವಾರ, ಜಿಲ್ಲೆಯ ಆರೋಗ್ಯ ಇಲಾಖೆ ಎಲ್ಲ ನೌಕರರು,
ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ಅಂಗನವಾಡಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.

