ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಸಚಿವ ಎಂ.ಬಿ.ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕನಿಷ್ಠ 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲು ಕಾರ್ಯೋನ್ಮುಖರಾಗಿರುವುದಾಗಿ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ತಿಕೋಟಾ ತಾಲೂಕಿನ ಹೊನವಾಡ ಮತ್ತು ಘೋಣಸಗಿಯಲ್ಲಿ ನಾನಾ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೊದಲಿಗೆ ಹೊನವಾಡದಲ್ಲಿ ಕೆ.ಎನ್.ಎನ್.ಎಲ್ ವತಿಯಿಂದ ರೂ. 1 ಕೋ. ವೆಚ್ಚದಲ್ಲಿ ಹೊನವಾಡ- ಕನಮಡಿ ರಸ್ತೆ, ರೂ. 1.40 ಕೋ. ವೆಚ್ಚದಲ್ಲಿ ಹೊನವಾಡ- ಬಿಜ್ಜರಗಿ ಹಾಗೂ ಪಿ.ಆರ್.ಡಿ ಇಲಾಖೆಯ ವತಿಂಯದ ರೂ. 80 ಲಕ್ಷ ವೆಚ್ಚದಲ್ಲಿ ಹೊನವಾಡ-ಬಾಬಾನಗರ ರಸ್ತೆ ದುರಸ್ಥಿ ಕಾಮಗಾರಿಗೆ ಅವರು ಭೂಮಿಪೂಜೆ ನೆರವೇರಿಸಿದ ಮಾತನಾಡಿದ ಅವರು, ಬರದ ನಾಡಗಿದ್ದ ಹೊನವಾಡ ಭಾಗದಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ರೂ. 3600 ಕೋ. ವೆಚ್ಚದಲ್ಲಿ ಕೈಗೊಂಡ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದಾಗಿ ಈ ಭಾಗದಲ್ಲಿ ರೈತರು ಕೋಟ್ಯಂತರ ರೂಪಾಯಿ ಕಬ್ಬು ಬೆಳೆದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಕೆಲಸ ಮಾಡಿದವರ ಉಪಕಾರ ಸ್ಮರಿಸಿ ಕೈ ಬಲಪಡಿಸಿದರೆ ಮತ್ತಷ್ಟು ಅಭಿವೃದ್ಧಿ ಮಾಡಲು ಸ್ಪೂರ್ತಿ ಸಿಗುತ್ತದೆ. ಗ್ರಾಮದೇವತೆ ಬನಶಂಕರಿ ಆಶೀರ್ವಾದದಿಂದಾಗಿ ಇನ್ನೂ ಹೆಚ್ಚೆಚ್ಚು ಕಲಸ ಮಾಡಲು ಶಕ್ತಿ ಸಿಕ್ಕಿದೆ. ಗ್ರಾಮದಲ್ಲಿ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಸೂಚನೆ ನೀಡಿದ್ದೇನೆ. ಇಲ್ಲಿನ ಎಲ್ಲ ಶಾಲೆಗಳಿಗೆ ಸಿ.ಎಸ್.ಆರ್ ಅನುದಾನದಲ್ಲಿ ಕಾನ್ವೆಂಟ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಘೊಣಸಗಿ ಗ್ರಾಮದ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನ ಹತ್ತಿರ ಕೆ.ಎನ್.ಎನ್.ಎಲ್ ವತಿಯಿಂದ ರೂ. 80 ಲಕ್ಷ ವೆಚ್ಚದಲ್ಲಿ ಅಳಗಿನಾಳ-ಗುಡ್ಡಾಪುರ ಗಡಿವರೆಗೆ ರಸ್ತೆ ಮತ್ತು ಸಿಡಿ ಕಾಮಗಾರಿಗಳಿಗೆ ಹಾಗೂ ರೂ.1.25 ಕೋಟಿ ವೆಚ್ಚದಲ್ಲಿ ಘೋಣಸಗಿ ಮುಖ್ಯರಸ್ತೆಯಿಂದ ಹುಬನೂರ ಮಹಾರಾಷ್ಟ್ರ ಗಡಿಯವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.
ಜಲಸಂಪನ್ಮೂಲ ಸಚಿವನಾಗಿ ನೀರಾವರಿ ಕ್ರಾಂತಿ ಮಾಡಿದ್ದೇನೆ. ಈಗ ಕೈಗಾರಿಕೆ ಸಚಿವನಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಸುಮಾರು ರೂ. 1 ಲಕ್ಷ ಕೋ. ಬಂಡವಾಳ ಹೂಡಿಕೆಯಾಗಿ ಜಿಲ್ಲೆಯ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿಯೇ ಪಾಪಕಾನ್ಸ್ ಕಂಪನಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಲಿದೆ ಎಂದು ಹೇಳಿದರು.
ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡ ಯಾಕೂಬ್ ಜತ್ತಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂರಾದ ಸೋಮನಾಥ ಬಾಗಲಕೋಟ, ಜಕ್ಕಪ್ಪ ಯಡವೆ, ರಾಮಣ್ಣ ಮೆಂಡೆಗಾರ, ಎಂ. ಬಿ. ಹೊಸಮನಿ, ಸಿದ್ದಗೊಂಡ ರುದ್ರಗೌಡರ, ತುಕಾರಾಮ ಧಡಕೆ, ವಿಜಯಕುಮಾರ ಹಿರೇಮಠ, ರಾಮಗೊಂಡ ಚಾವರ, ಆರ್. ಜಿ. ಯರನಾಳ, ಗುರು ಮಾಳಿ, ರಾಜುಗೌಡ ಬಿರಾದಾರ, ಅಪ್ಪು ಬಗಲಿ, ಮಲ್ಲು ಎಬ್ಬೆ, ಟಿ. ಎಂ. ಪಾಟೀಲ, ಅಂಜನಾ ಪವಾರ, ಜಿ. ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಮುಂತಾದವರು ಉಪಸ್ಥಿತರಿದ್ದರು.

“ಘೊಣಸಗಿ, ಕಳ್ಳಕವಟಗಿ, ಅಳಗಿನಾಳ ಗ್ರಾಮಗಳಿಗೆ ಯೋಜನಾಬದ್ಧವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷದಿಂದ ಮೊದಲಿಗೆ ಟೇಲ್ ಎಂಡ್ ನಿಂದ ಪ್ರಾರಂಭಿಸಿ ನಂತರ ಉಳಿದೆಡೆಗೆ ನೀರು ಹರಿಸಲಾಗುವುದು. ಉಳಿದ ಭಾಗಕ್ಕೂ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಘೊಣಸಗಿ ಗ್ತಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ರೂ. 12 ಕೋ. ವೆಚ್ಚದಲ್ಲಿ 110 ಕೆ.ವಿ. ವಿದ್ಯುತ್ ಸ್ಟೇಷನ್ ಮಂಜೂರ ಮಾಡಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ದೇವರು ನಮಗೆ ಕೊಟ್ಟಿದ್ದನ್ನು ನಿಮಗೆ ನೀಡಿದ್ದೇನೆ. ವಿಜಯಪುರ ಜಿಲ್ಲೆ ಮಹಾರಾಷ್ಟ್ರದ ಬಾರಾಮತಿಯಂದೆ ಸಮಗ್ರ ಅಭಿವೃದ್ಧಿಯಾಗಲು ಗುರಿ ಹೊಂದಿದ್ದೇನೆ.”
– ಎಂ.ಬಿ.ಪಾಟೀಲ
ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

