ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯೋಗ ಒಂದು ವಿಜ್ಞಾನವಾಗಿದ್ದು, ಇದರಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಫಿಜಿಯಾಲಜಿ ವಿಭಾಗದ ಸೆಂಟರ್ ಪಾರ್ ಯೋಗ ಆ್ಯಂಡ್ ಎಕ್ಸರ್ಸೈಜ್ ಸಾಯಿನ್ಸ್ ಸಂಯೋಜಕಿ ಮತ್ತು ಎಡಿಷನಲ್ ಪ್ರೊಫೆಸರ್ ಡಾ. ಜ್ಯೋತಿ ಖೊದ್ನಾಪುರ ಹೇಳಿದ್ದಾರೆ.
ಶುಕ್ರವಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ(ಜೆ.ಎಸ್.ಎಸ್) ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ತಿಂಗಳ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ನಡುವೆ ಸಮನ್ವಯತೆ ಅಗತ್ಯವಾಗಿದೆ ಎಂದು ಹೇಳಿದ ಅವರು, ಯೋಗ, ಅದರ ಮಹತ್ವ ಹಾಗೂ ಅದರಿಂದ ಸಿಗುವ ಲಾಭಗಳ ಕುರಿತು ಅವರು ವೈಜ್ಞಾನಿಕವಾಗಿ ಮಾಹಿತಿ ನೀಡಿದರು.
ಯೋಗ ಶಿಕ್ಷಕ ಮಡಿವಾಳಪ್ಪ ದೊಡಮನಿ ಮಾತನಾಡಿ, ಯೋಗ ಭಾರತೀಯರು ವಿಶ್ವಕ್ಕೆ ನೀಡಿರುವ ದೊಡ್ಡ ಕೊಡುಗೆಯಾಗಿದೆ. ಬಸವಣ್ಣನವರು ವಿಶ್ವಕ್ಕೆ ಶಿವಯೋಗವನ್ನು ಪರಿಚಯಿಸಿದ್ದಾರೆ. ಇದರಿಂದ ಯೋಗದ ಮೂಲಕವು ರೋಗ ನಿಯಂತ್ರಣ ಮತ್ತು ನಿವಾರಣೆ ಸಾಧ್ಯ ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಐ. ಎಸ್. ಕಾಳಪ್ಪನವರ ಮಾತನಾಡಿ, ಸಾಧನೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮತ್ತು ಶರೀರ ಹಾಗೂ ಮನಸ್ಸನ್ನು ಜೋಡಿಸಿಕೊಳ್ಳುವುದೇ ಯೋಗ ಎಂದು ಹೇಳಿದರು
ಈ ವೇಳೆ ದೈಹಿಕ ಶಿಕ್ಷಣ ನಿರ್ದೇಶಕ ಎ. ಎಸ್. ಮಸಳಿ ಮತ್ತು ಯೋಗ ಶಿಕ್ಷಕ ಮಡಿವಾಳಪ್ಪ ದೊಡಮನಿ ನೇತೃತ್ವದಲ್ಲಿ ಸಾಂಕೇತಿಕವಾಗಿ ಯೋಗ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವಾಯ್. ಖಾಸನಿಸ್, ಬಿ.ಎಲ್.ಡಿ.ಇ ಸಂಸ್ಥೆಯ ಸಹಾಯಕ ದೈಹಿಕ ನಿರ್ದೇಶಕ ಕೈಲಾಸ ಹಿರೇಮಠ, ಸಹ ಪ್ರಾಧ್ಯಾಪಕ ಡಾ. ಎಂ. ಎಸ್. ಹಿರೇಮಠ, ಡಾ. ಮಂಜುನಾಥ ಕೋರಿ, ಸಹಾಯಕ ಪ್ರಾಧ್ಯಾಪಕ ಡಾ. ಜೆ. ಎಸ್. ಪಟ್ಟಣಶೆಟ್ಟಿ, ಡಾ. ಬಿ. ಎಸ್. ಹಿರೇಮಠ, ಡಾ. ಮಂಜುನಾಥ ಕೋರಿ, ಪಿ. ಡಿ. ಮುಲ್ತಾನಿ, ಎಸ್. ಎ. ದೇಸಾಯಿ, ಸಂಶೋಧನೆ ವಿದ್ಯಾರ್ಥಿ ಸುಜಾತ ಮತ್ತಿವಾಡ ಹಾಗೂ ಪ್ರಶಿಕ್ಷಣಾರ್ಥಿಗಳ ಉಪಸ್ಥಿತರಿದ್ದರು
ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಪಿ. ಶೇಗುಣಸಿ ನಿರೂಪಿಸಿ ವಂದಿಸಿದರು.

