ಮುದ್ದೇಬಿಹಾಳದಲ್ಲಿ ಮೆಗಾ ಮಾರುಕಟ್ಟೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಬಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಮಾಜದಲ್ಲಿ ಸಮಾನತೆ ಬರಬೇಕಾದರೆ ಸರ್ವರೂ ಸಮನಾಗಿ ಬಾಳಬೇಕು. ರಾಜಕಾರಣಿಗಳು, ಮುಖಂಡರು ಸರ್ವರನ್ನು ಸಮನಾಗಿ ಕರೆದುಕೊಂಡು ಹೋಗಬೇಕು. ಎಲ್ಲರನ್ನೂ ಸಮಾನರಾಗಿ ಕರೆದುಕೊಂಡು ಹೋಗುವದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಹೇಳಿದರು.
ಪಟ್ಟಣದ ಮುಖ್ಯ ಬಜಾರನಲ್ಲಿ ನಿರ್ಮಿಸಲಾಗುತ್ತಿರುವ ಮೆಗಾ ಮಾರುಕಟ್ಟೆ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕನಾದ ಮಾತ್ರಕ್ಕೆ ನನ್ನ ಆಕಾರ ಬದಲಾಗುವದಿಲ್ಲ. ಅತೀ ಸರಳವಾಗಿ ರಾಜಕೀಯ ಜೀವನವನ್ನು ಸಾಗಿಸಿದಲ್ಲಿ ದೊಡ್ಡವರಾಗಿ ಬೆಳೆಯಲು ಮತ್ತು ರಾಜಕೀಯ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ನಂಬಿದವನು ನಾನು. ಮತಕ್ಷೇತ್ರದ ಜನತೆಯ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತಲುಪಿಸುವ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಸಮಾಜದ ಕಟ್ಟ ಕಡೆಯ ಬಡ ವ್ಯಕ್ತಿಯೂ ಕೂಡ ತಲೆ ಎತ್ತಿ ಜೀವನ ನಡೆಸಲು ನೇರವಾಗಿ ಅವರಿಗೆ ಹಣ ಮುಟ್ಟಿಸುವ ಕೆಲಸವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ಮಾಡುತ್ತಿದೆ. ನಮ್ಮ ಸರ್ಕಾರದಲ್ಲಿ ನಿರಂತರವಾಗಿ ಅಭಿವೃದ್ಧಿ ಸಾಗಲಿದೆ. ಅಭಿವೃದ್ಧಿ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಮತಕ್ಷೇತ್ರದ ಅಭಿವೃದ್ಧಿ ಭರದಿಂದ ಸಾಗುತ್ತಿದ್ದು, ಕೂಡಲೇ ಪಟ್ಟಣದಲ್ಲಿ ಸಿಟಿ ಬಸ್ ಸಂಚರಿಸಿದೆ. ಅಭಿವೃದ್ಧಿಗೆ ಸಾರ್ವಜನಿಕರು ಸಾಥ್ ನೀಡಬೇಕು ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ ಬಲರಾಮ ಕಟ್ಟಿಮನಿ, ಗಣ್ಯ ವ್ಯಾಪಾರಿಗಳಾದ ಬಸವರಾಜ ಮೋಟಗಿ, ಪ್ರಬು ಕಡಿ, ಗಫೂರ ಮಕಾನದಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಸದಸ್ಯರಾದ ಪ್ರತಿಭಾ ಅಂಗಡಗೇರಿ, ಹಣಮಂತ ಭೋವಿ, ಶಹಜಾದಬಿ ಹುಣಚಗಿ, ಭಾರತಿ ಪಾಟೀಲ, ವಿರೇಶ ಹಡಲಗೇರಿ, ರಿಯಾಜ ಢವಳಗಿ, ಚನ್ನಪ್ಪಣ್ಣ ಕಂಠಿ, ಶಿವು ಶಿವಪೂರ, ಸದಾಶಿವ ಮಾಗಿ, ಬಸವರಾಜ ಮುರಾಳ, ಸಹನಾ ಬಡಿಗೇರ, ಶರೀಫಾ ಮೂಲಿಮನಿ, ಸೋನಾಬಾಯಿ ನಾಯಕ, ರಫೀಕ ದ್ರಾಕ್ಷಿ, ಬಸಪ್ಪ ತಟ್ಟಿ, ಅಶೋಕ ವನಹಳ್ಳಿ, ಶಿವು ಶಿವಪೂರ ನಾಮ ನಿರ್ದೇಶಿತ ಸದಸ್ಯರಾದ ಹರೀಶ ಬೇವೂರ, ಗೋಪಿ ಮಡಿವಾಳರ, ಸಂತೋಷ ನಾಯ್ಕೋಡಿ ಸೇರಿದಂತೆ ಮತ್ತೀತರರು ವೇದಿಕೆ ಮೇಲಿದ್ದರು.
ಸಿದ್ಧನಗೌಡ ಬಿಜ್ಜೂರ ಮತ್ತು ಗುಂಡು ಚೌವ್ಹಾಣ ಕಾರ್ಯಕ್ರಮ ನಿರ್ವಹಿಸಿದರು.
“ಪ್ರಜಾಪ್ರಭುತ್ವದ ಉಳಿವಿಗಾಗಿ ಹಿತವಾದ ಟೀಕೆಗಳನ್ನು ನಮ್ಮ ಸರ್ಕಾರ ಸ್ವಾಗತಿಸುತ್ತದೆ. ಟೀಕೆಗಳು ಬೆಳವಣಿಗೆಗೆ ಆಧಾರವಾಗಬೇಕೇ ಹೊರತು ರಾಜಕೀಯ ಚಪಲಕ್ಕೆ, ಜನರನ್ನು ದಾರಿ ತಪ್ಪಿಸುವದಕ್ಕೆ ಆಗಬಾರದು. ಸೈದ್ಧಾಂತಿಕವಾದ ವಿಚಾರಗಳು ಬೇರೆ ಇದ್ದರೂ ಕೂಡ ಭಾವನಾತ್ಮಕವಾಗಿ ಒಂದಾಗಿರಬೇಕು ಎನ್ನುವದನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು.”
– ಸಿ.ಎಸ್.ನಾಡಗೌಡ ಅಪ್ಪಾಜಿ
ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕರು.

