ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದು ವ್ಯಸನಮುಕ್ತ ಹಾಗೂ ಸ್ವಚ್ಛ ಪರಿಸರಯುಕ್ತ ಸಮಾಜ ನಿರ್ಮಾಣದ ಅಗತ್ಯವಿದೆ. ಸಮಾಜದಲ್ಲಿ ಕೆಲವರು ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಆ ನೋವಿನಿಂದ ಹೊರಬರುವುದಕ್ಕಾಗಿ ಕೆಲ ದುಶ್ಚಟಗಳ ದಾಸರಾಗಿ ಕೊನೆಗೆ ತಮ್ಮ ಬದುಕನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಅರಿತುಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಸಿ.ಸಿಂಪಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಔಷಧ ಮಹಾವಿದ್ಯಾಲಯ, ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು,ಅಮೂಲ್ಯವಾದ ಶರೀರ ಸಂಪತ್ತನ್ನು ಕಾಯ್ದುಕೊಳ್ಳಬೇಕಾದರೆ ನಾವು ದುಶ್ಚಟಗಳಿಂದ ದೂರವಿರಬೇಕು. ದ್ವೇಷ, ಅಸೂಯೆ, ಕ್ರೋಧಗಳನ್ನು ನಿಯಂತ್ರಿಸಿ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಪ್ರತಿನಿತ್ಯವೂ ಯೋಗ, ಧ್ಯಾನದ ಅಗತ್ಯವಿದೆ. ಯುವಜನಾಂಗ ಇದನ್ನು ಅರಿತು ದುಶ್ಚಟಗಳಿಂದ ದೂರವಿದ್ದು ಸುಂದರ ಜೀವನ ತಮ್ಮದಾಗಿಸಿಕೊಳ್ಳಬೇಕೆಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಭಾವನಾ, ಬ್ರಹ್ಮಕುಮಾರ ಕಾಶೀನಾಥ ಮಾತನಾಡಿ, ಸುಖ, ಶಾಂತಿ, ಏಕಾಗ್ರತೆ, ಸ್ಮರಣಶಕ್ತಿ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಕಲಿಯಬೇಕು. ತಮಗಾಗಿ ಸರ್ವೋಚ್ಛ ಜೀವನವನ್ನು ನಿರ್ಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯವು ಕಲಿಸುವ ರಾಜಯೋಗವು ಈ ದಿಕ್ಕಿನಲ್ಲಿ ಬಹಳ ಸಹಾಯಕವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ವ್ಯಸನಮುಕ್ತ ಭಾರತ ನಿರ್ಮಾಣದ ಪ್ರತಿಜ್ಞಾವಿಧಿ ಬೋಧಿಸಿದರು.
ರಾಜ್ಯಶಾಸ ಹಾಗೂ ಐಕ್ಯೂಎಸಿ ಮುಖ್ಯಸ್ಥ ಪ್ರೊ.ದಿಲೀಪಕುಮಾರ ಮಾತನಾಡಿ, ನಮ್ಮ ಇತಿಮಿತಿಯಲ್ಲಿದ್ದುಕೊಂಡು ಪ್ರಕೃತಿ ನೀಡಿರುವ ಎಲ್ಲ ಸೌಲಭ್ಯಗಳನ್ನು ಅನುಭವಿಸಿ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು. ನಾವೆಲ್ಲರೂ ವ್ಯಸನಮುಕ್ತ ಜೀವನ ನಡೆಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಎಂ.ಸಾಲವಾಡಗಿ, ಎಂ.ಕೆ.ಯಾದವ, ಜಯರಾಮರೆಡ್ಡಿ, ಆರ್.ಎನ್.ರಾಠೋಡ, ಡಾ.ಎ.ಎಂ.ಪಾಟೀಲ, ಸುರೇಶ ಗುಣಕಿ, ಮಹಾಂತೇಶ ಕವಟೇಕರ, ಅನಿಲ ಮೇತ್ರಿ, ರೇಣುಕಾ ಕಬಾಡೆ, ಚೇತನ ತೇಲಿ, ಮುತ್ತು ಡಂಬಳ, ಬಸವರಾಜ ಸಂಖ ಇತರರು ಇದ್ದರು.

