ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿ ಹೈಟೆಕ್ ಮೆಗಾ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು ಅದರ ಭೂಮಿ ಪೂಜೆಯನ್ನು ಫೆ.೨೭ ರಂದು ಸಂಜೆ ೫ಗಂಟೆಗೆ ನೆರವೇರಿಸಲಾಗುತ್ತಿದೆ. ಎಲ್ಲ ವ್ಯಾಪಾರಸ್ಥರು, ಅಭಿವೃದ್ಧಿ ಪರ ಚಿಂತಕರು, ವ್ಯಾಪಾರಸ್ಥರು, ರಾಜಕೀಯ ಮುಖಂಡರು, ಎಲ್ಲ ನಾಗರಿಕರು ಭಾಗಿಯಾಗಿ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಗಣ್ಯ ವ್ಯಾಪಾರಸ್ಥರ ಸಭೆ ಕರೆದು ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಮುದ್ದೇಬಿಹಾಳ ಇವರ ಸಂಯುಕ್ತ್ತ ಆಶ್ರಯದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಭೂಮಿ ಪೂಜೆಯನ್ನು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿ ನೆರವೇರಿಸಲಿದ್ದಾರೆ.
ಈ ಕಟ್ಟಡ ಹಲವು ವ್ಯಾಪಾರಿಗಳ ಕನಸಾಗಿದೆ. ಕಟ್ಟಡದ ಅಂಡರ್ ಗ್ರೌಂಡ್ ನಲ್ಲಿ ಪಾರ್ಕಿಂಗ್ ಸೌಲಭ್ಯ ಕೂಡ ಇರಲಿದ್ದು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಈ ವೇಳೆ ಗಣ್ಯ ವರ್ತಕ ವಾಸುದೇವ ಶಾಸ್ತ್ರೀ ಮಾತನಾಡಿ ಕಟ್ಟಡ ನಿರ್ಮಾಣವಾಗುತ್ತಿರುವದು ಸಂತಸದ ವಿಷಯ. ಅಂಗಡಿಗಳನ್ನು ಕೊಂಚ ದೊಡ್ಡದಾಗಿ ನಿರ್ಮಿಸಿದಲ್ಲಿ ವ್ಯಾಪಾರಕ್ಕೆ ಅನುಕೂಲವಾಗುತ್ತದೆ. ಕಟ್ಟಡ ನಿರ್ಮಾಣದ ಬಳಿಕ ವ್ಯಾಪಾರಿಗಳಿಗೆ ನೀಡುವಾಗ ಹಳೆಯ ಕಟ್ಟಡದ ಅಂಗಡಿಗಳ ಮಾಲೀಕರಿಗೆ ಮೊದಲ ಆದ್ಯತೆ ನೀಡಬೇಕು. ಪುರಸಭೆಯಿಂದ ಒಳ್ಳೆಯ ಕಾರ್ಯಗಳು ನಡೆಯುತ್ತಿದ್ದು ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಅಧ್ಯಕ್ಷ ಮಹೆಬೂಬ ಗೊಳಸಂಗಿ ಮುಖ್ಯ ರಸ್ತೆಯ ಒತ್ತು ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಬೇರೆಡೆಗೆ ಸ್ಥಾಳಾವಕಾಶ ಮಾಡಿ ಕೊಟ್ಟಿದ್ದು ಇಡೀ ಪಟ್ಟಣವೇ ಶ್ಲಾಘಿಸುತ್ತಿದೆ. ಆದರೆ ಇದು ನಾಲ್ಕು ದಿನಕ್ಕೆ ಸೀಮಿತವಾಗದಂತೆ ನೋಡಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪ್ರಮುಖರಾದ ವಿಕ್ರಂ ಓಸ್ವಾಲ, ಮಹಾಂತೇಶ ಬೂದಿಹಾಳಮಠ, ಅಪ್ಪು ದೇಗಿನಾಳ ಮಾತನಾಡಿದರು. ಪು.ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಸದಸ್ಯರಾದ ವಿರೇಶ ಹಡಲಗೇರಿ, ರಫೀಕ ದ್ರಾಕ್ಷಿ, ಶಹಜಾದಬಿ ಹುಣಚಗಿ, ಅಶೋಕ ವನಹಳ್ಳಿ, ನಾಮ ನಿರ್ದೇಶಿತ ಸದಸ್ಯರಾದ ಹರೀಶ ಬೆವೂರ, ಗೋಪಿ ಮಡಿವಾಳರ, ಸಂತೋಷ ನಾಯ್ಕೋಡಿ ಸೇರಿದಂತೆ ಹಲವರು ಇದ್ದರು.

