ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ರೈತರು ಒಂದು ಎಕರೆ ಕಬ್ಬು ಪ್ರದೇಶದಲ್ಲಿ ಕೇವಲ ೩೦ ರಿಂದ ೪೦ ಟನ್ ಇಳುವರಿ ಮಾತ್ರ ಕಬ್ಬು ಬೆಳೆ ಪಡೆಯುತ್ತಿದ್ದು ಪ್ರತಿ ಎಕರೆಗೆ ೧೦೦ ಟನ್‌ಇಳುವರಿ ಪಡೆಯಲು ಪ್ರಯತ್ನಿಸುವ ಅಗತ್ಯತೆ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರಮೂರ್ತಿ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಬ್ಬಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಹಾಗೂ ಅತ್ಯಾಧಿಕ ಇಳುವರಿ ಮತ್ತು ಕಿಸಾನ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಬ್ಬು ಬೆಳೆಗೆ ಮಣ್ಣು ಪರೀಕ್ಷೆ ಮತ್ತು ಮಣ್ಣಿನಲ್ಲಿ ಸವಳು ಅಥವಾ ಪಿಎಚ್ ಪರೀಕ್ಷೆಗಳು ಮುಖ್ಯ. ಅದರ ಆಧಾರದ ಮೇಲೆ ಇಳುವರಿ ಹೆಚ್ಚು ಬರುವ ಹಾಗೆ ವ್ಯವಸ್ಥೆ ಮಾಡಬೇಕು. ಕಬ್ಬು ಗಾಳಿ ಮತ್ತು ಬೆಳಕು ಬಯಸುವ ಬೆಳೆ. ಹಾಗಿದ್ದರೆ ಮಾತ್ರ ಪ್ರತಿ ಕಬ್ಬಿನ ತೂಕವೂ ಹೆಚ್ಚು ಬರುತ್ತದೆ. ಗ್ಲೂಕೋಸ್ ಮತ್ತು ಸಾರಜನಕ ಪೂರೈಕೆ ಇದ್ದರೆ ಮೊಳಕೆ ಬರುತ್ತದೆ. ೩೦ ರಿಂದ ೧೨೦ ದಿನಗಳ ವರೆಗೆ ಮರಿ ಒಡೆಯುವ ಹಂತ. ಆಗ ನೀರು ಕಡಿಮೆ ಬಿಡಬೇಕು. ರಂಜಕ, ಸಾವಯುವ ತಿಪ್ಪೆ ಗೊಬ್ಬರ, ಡಿಎಪಿ ಸರಿಯಾದ ವೇಳೆಯಲ್ಲಿ ನೀಡಬೇಕು ಎಂದರು.
ಜೈವಿಕ ಜೀವಾಣು ಎಕರೆಗೆ ಅಜೋಸ್ಟರಿಲಂ ಅಜಟೊಬ್ಯಾಕ್ಟಾರ್ ಪ್ರತಿ ಎಕರೆಗೆ ೪ ಕೆಜಿ ಮತ್ತು ಡಿ.ಎಸ್.ಬಿ, ಕೆ.ಎಸ್.ಬಿ, ಪ್ರತಿ ಎಕರೆಗೆ ೪ ಕೆಜಿ ನೀಡಬೇಕು. ಪೋಷಕಾಂಶಗಳ ಸಿಂಪರಣೆ, ಬಯೋಜಮ ಹರಳು ಮತ್ತು ಜೀವಾಮೃತ ದ್ರವರೂಪದ ಗೊಬ್ಬರ ನೀಡುವದರಿಂದ ಕಬ್ಬಿನ ಬೆಳೆಯಲ್ಲಿ ಅಧಿಕ ತೂಕ ಪಡೆಯಬಹುದು ಎಂದರು.
ಕೃಷಿ ವಿದ್ಯಾಲಯದ ಸಲಹಾ ಸಮಿತಿ ಸದಸ್ಯ ನಿಂಗನಗೌಡ ಪಾಟೀಲ, ಸಾವಯುವ ರೈತ ಎಸ್.ಟಿ.ಪಾಟೀಲ,ಡಾ. ಪ್ರಸಾದ ಮತ್ತು ಡಾ. ವೀಣಾ ಚಂದಾವರಿ ಮಾತನಾಡಿದರು.
ಇದೇ ವೇಳೆ ಪ್ರಗತಿಪರ ರೈತರಾದಸುನೀಲ ನಾರಾಯಣಕರ, ಶಿವು ಕುಂಬಾರ, ರಮೇಶ ದೇಸಾಯಿ, ಬಸೀರ್ ಅಹಮ್ಮದ ಬಳಿಗಾರ, ರೇವತಿ ಮಜ್ಜಗೆ, ರಾಯಪ್ಪ ಹರಳಯ್ಯ ಇವರನ್ನು ಸನ್ಮಾನಿಸಲಾಯಿತು.

