ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಲ್ಮೇಶ್ವರ ದೇವಸ್ಥಾನಕ್ಕೆ ಮಹಾಶಿವರಾತ್ರಿ ನಿಮಿತ್ಯವಾಗಿ ಶಿವಯೋಗದ ನಂತರ ಭಕ್ತರು ಆಗಮಿಸಿ ನೈವಿಧ್ಯ ಅರ್ಪಿಸಿ ಕಾಶೀಲಿಂಗನ ದರ್ಶನ ಪಡೆದರು.
ಪಟ್ಟಣದ ಆರಾಧ್ಯ ದೇವನೇನಿಸಿದ ಕಲ್ಮೇಶ್ವರನ ದೇವಸ್ಥಾನಕ್ಕೆ ಬುಧವಾರ ಶಿವರಾತ್ರಿ ಅಂಗವಾಗಿ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ, ನೈವಿಧ್ಯೆ ಅರ್ಪಿಸುವುದರ ಮೂಲಕ ಶಿವಯೋಗದ ಭಕ್ತಿಭಾವ ಮೆರೆದರು. ಬೆಳಿಗ್ಗೆಯಿಂದಲೇ ಉಪವಾಸ ವೃತಕೈಗೊಂಡಿದ್ದ ಭಕ್ತ ಸಮೂಹ ಸಾಯಂಕಾಲ ಸ್ನಾನ , ಪೂಜಾದಿ ಕರ್ಮಗಳನ್ನು ಮುಗಿಸಿ ದೇವಸ್ಥಾನಕ್ಕೆ ಆಗಮಿಸಿದರು. ನಂತರ ಪುಷ್ಪಗಳಿಂದ ಅಲಂಕೃತಗೊಂಡ ಶಿವಲಿಂಗ ದರ್ಶನ ಪಡೆದು ಪುನೀತರಾದರು. ಅದರಲ್ಲೂ ಮಹಿಳೆಯರು ಹಣ್ಣುಗಳಿಂದ ಕೂಡಿದ ನೈವಿಧ್ಯ ತಂದು ಅರ್ಪಿಸುವುದು ಸಾಮಾನ್ಯವಾಗಿತ್ತು. ಅರ್ಚಕರು ಕಲ್ಮೇಶ್ವರ(ಕಾಶೀಲಿಂಗ)ನಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಿಲ್ವಪತ್ರೆ, ಪುಷ್ಪ, ಹಾರಗಳಿಂದ ಅಲಂಕಾರಗೊಳಿಸಿ ಭಕ್ತ ಸಮೂಹದ ದರ್ಶನಕ್ಕೆ ಗರ್ಭಗುಡಿಗುಡಿಯಲ್ಲಿ ಅವಕಾಶ ಕಲ್ಪಿಸಿದ್ದರು.
ಪಟ್ಟಣದ ಮಲ್ಲಯ್ಯನ ದೇವಸ್ಥಾನ, ಶಿವನಕಳ್ಳಿಯ ಶಿವನ ದೇವಾಲಯ, ಹೊಸನಗರದ ಪ್ರಳಯರುದ್ರ ಈರಣ್ಣ ದೇವಸ್ಥಾನ, ಇಂಡಿ ರಸ್ತೆಯ ರೇಣುಕಾಚಾರ್ಯ ಮಂದಿರದ ಶಿವಲಿಂಗಗಳಿಗೆ ಶಿವರಾತ್ರಿ ನಿಮಿತ್ಯ ವಿಶೇಷ ಪೂಜೆಗಳು ಜರುಗಿದವು. ಭಕ್ತರು ದರ್ಶನ ಪಡೆದು ಪುನೀತರಾದರು.

