ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಮಲ್ಲಿಕಾರ್ಜುನಮಠ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ವಿದ್ಯುತ್ ಅವಘಡ ಉಂಟಾಗಿ ಸುಮಾರು ೧.೫೦ ಮೌಲ್ಯದ ಕಬ್ಬಿನ ಬೀಜ, ರೌದಿ, ಪೈಪ್‌ಗಳು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಜರುಗಿದೆ.
ಪಟ್ಟಣದ ಪ್ರಭಾವತಿ ಮಲ್ಲಿಕಾರ್ಜುನಮಠ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಬ್ಬು ಹಾಗೂ ದ್ರಾಕ್ಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೆಲವು ದಿನಗಳ ಹಿಂದೆ ಕಬ್ಬನ್ನು ಕಟಾವು ಮಾಡಿ ಬೀಜಗಳನ್ನು ಹಾಗೂ ರೌದಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಆದರೆ ಏಕಾಏಕಿ ವಿದ್ಯುತ್ ಶಾಟ್ ಸರ್ಕಿಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಕಬ್ಬಿನ ಬೀಜ, ದ್ರಾಕ್ಷಿ ಬೆಳೆಗೆ ಅಗತ್ಯವಾದ ೩೦ ರೌದಿ ಬಂಡಲ್‌ಗಳು, ಪೈಪ್‌ಗಳು ಸುಟ್ಟು ಹಾನಿಗೀಡಾಗಿದೆ. ಜೊತೆಗೆ ದ್ರಾಕ್ಷಿ ಬೆಳೆಯ ಎರಡು ಸಾಲುಗಳು ಸಹ ಸಂಪೂರ್ಣ ಹಾಳಾಗಿವೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು ಆದರೂ ಬಹುತೇಕ ಸುಟ್ಟು ಕರಕಲಾಗಿದ್ದವು.
ಜಿಲ್ಲೆಯಾದ್ಯಂತ ಹಲವಾರು ತಿಂಗಳಿನಿಂದ ವಿದ್ಯುತ್ ಅವಘಡದಿಂದ ಕಬ್ಬು ಬೆಳೆಯುವ ರೈತರು ತೊಂದರೆಗೆ ಇಡಾಗುತ್ತಿದ್ದಾರೆ. ಅದಕ್ಕಾಗಿ ಕಬ್ಬಿನ ಬೆಳೆಗಳ ಮೇಲಿನ ತಂತಿಗಳನ್ನೆಲ್ಲ ಬದಲಾಯಿಸಬೇಕು. ರೈತರಿಗೆ ಆದ ನಷ್ಟವನ್ನು ತಕ್ಷಣವೇ ತುಂಬಿಕೊಡಬೇಕೆಂದು ಸ್ಥಳೀಯ ರೈತ ಪ್ರಮುಖರು ಸರ್ಕಾರವನ್ನು ಆಗ್ರಹಿಸಿದ್ದಾರೆ.

