ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಾಶಿವರಾತ್ರಿಯ ಉಪವಾಸ ಆಚರಣೆಯಿಂದ ನಕಾರಾತ್ಮಕ ಚಿಂತನೆ, ಶಕ್ತಿಗಳು ದೂರವಾಗುತ್ತವೆ ಎಂದು ಪ್ರವಚನಕಾರ ಅಮೃತಾನಂದಶ್ರೀಗಳು ಹೇಳಿದರು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರಮಠದ ಆವರಣದಲ್ಲಿ ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವರಾತ್ರಿಯ ಆಚರಣೆಯಿಂದ ಜೀವನಕ್ಕೆ ಹೊಸ ಚೈತನ್ಯ ಲಭಿಸುತ್ತದೆ. ಜೊತೆಗೆ ಪ್ರತಿಯೊಬ್ಬ ವ್ಯಕ್ತಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಆಧ್ಯಾತ್ಮೀಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಬೋರೆಗಾಂವ ಅಮೋಘಸಿದ್ಧಮಠದ ಬಸವರಾಜಶ್ರೀ, ಬೆಳ್ಳೇರಿ ಬಸವಾನಂದ ಸ್ವಾಮೀಜಿ, ಗೋರಚಿಂಚೋಳಿಯ ಸಿದ್ಧರಾಮೇಶ್ವರ ಶ್ರೀ, ನಾಗಠಾಣ ಗುರುದೇವಾಶ್ರಮದ ಪ್ರಜ್ಞಾನಂದಶ್ರೀ, ಹುಲಜಂತಿಯ ಮಾಳಿಂಗರಾಯರು, ಮುಳಸಾವಳಗಿಯ ನಿಂಗರಾಯರು, ಬಾಲಗಾಂವದ ಅಮೋಘಸಿದ್ಧರು, ಸ್ಥಳೀಯ ಶಿವಯ್ಯ ಸ್ವಾಮೀಜಿ, ಗೋವಿಂದರು, ಚಿಕ್ಕರೂಗಿಯ ಶ್ರೀಮಂತ ಪೂಜಾರಿ, ಯಂಭತ್ನಾಳದ ಭೀಮಾಶಂಕರರು ಆಶೀರ್ವಚನ ನೀಡಿ ಮಾತನಾಡಿದರು.
ನಿವಾಳಖೇಡ ಗ್ರಾಮದ ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಬಸವಾನಂದಶ್ರೀಗಳು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮುಳಸಾವಳಗಿ ಶರಣಗೌಡ ಮಾಲಿಪಾಟೀಲ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ ಬಿಸನಾಳ, ವಿದ್ಯಾಧರ ಸಂಗೋಗಿ ಮಾತನಾಡಿದರು. ಪ್ರವಚನದ ನಂತರ ಶಿವರಾತ್ರಿ ಅಂಗವಾಗಿ ಹಣ್ಣು, ಖರ್ಜೂರದ ಮಹಾಪ್ರಸಾದ ಜರುಗಿತು.
ಸುರೇಶಗೌಡ ಬಿರಾದಾರ(ಚಿಕ್ಕರೂಗಿ), ಸೋಮನಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಸಾಹೇಬಗೌಡ ರೆಡ್ಡಿ, ನಿಂಗರಾಯ ಸಂಗೋಗಿ, ಪಿಡ್ಡಪ್ಪ ಗಣಜಲಿ, ವಿಧ್ಯಾಧರ ಸಂಗೋಗಿ, ಈರಣ್ಣ ಪಾಟೀಲ, ಯಲ್ಲಾಲಿಂಗ ಗಣಜಲಿ, ವಿಠ್ಠಲ ದೇಗಿನಾಳ, ವಿಠ್ಠಲ ಕನ್ನೋಳ್ಳಿ , ಪ್ರಭಾಕರ ಸೂಳಿಭಾವಿ, ಸುಭಾಸ ಕಬಾಡಗಿ ಸೇರಿದಂತೆ ಚಿಕ್ಕರೂಗಿ, ಮುಳಸಾವಳಗಿ ಸಹಿತ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

