ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾಶಿವರಾತ್ರಿಯ ಅಂಗವಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಬುಧವಾರ 770 ಅಮರ ಗಣಾಧೀಶ್ವರರ ಲಿಂಗದ ಗುಡಿ ಮತ್ತು ಶಿವಗಿರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮೊದಲಿಗೆ ನಗರದಲ್ಲಿರುವ 770 ಅಮರ ಗಣಾಧೀಶ್ವರರ ಲಿಂಗದ ಗುಡಿಗೆ ತೆರಳಿದ ಅವರು ವಿಶೇಷ ಪೂಜೆ ಸಲ್ಲಿಸಿ, ನಾಡಿನಾದ್ಯಂತ ಉತ್ತಮ ಮಳೆ, ಬೆಳೆ, ಶಾಂತಿ, ಸಮೃದ್ಧಿ ನೆಲೆಸಲಿ. ರಾಜ್ಯದ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,12 ನೇ ಶತಮಾನದಲ್ಲಿ 770 ಅಮರಗಣಂಗಳರು (ಶರಣರರು) ಬಸವೇಶ್ವರ ಜೊತೆಗೂಡಿ ಸಾಮಾಜಿಕ ಮೌಢ್ಯಗಳನ್ನು ಹೋಗಲಾಡಿಸಿ, ಸಮಾನತೆಗಾಗಿ ಶ್ರಮಿಸಿದ್ದರು. ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಹೆಸರಿನಲ್ಲಿಯೇ ಬಂಥನಾಳ ಶ್ರೀ ಸಂಗನಬಸವ ಮಹಾಶಿವಯೋಗಿಗಳ ದಿವ್ಯ ಸಂಕಲ್ಪದಂತೆ 1954 ರಲ್ಲಿ ನಗರದಲ್ಲಿ 770 ಅಮರ ಗಣಾಧೀಶ್ವರರ (ಅಮರಗಣಂಗಳ) ಸ್ಮಾರಕ ಲಿಂಗಗಳ ಪ್ರತಿಷ್ಠಾಪನೆಯಾಗಿ 1960ರಲ್ಲಿ ದೇವಸ್ಥಾನ ಲೋಕಾರ್ಪಣೆಯಾಗಿತ್ತು. ಏಳು ದಶಕಗಳ ನಂತರ ಕಳೆದ ವರ್ಷ ರೂ. 1.51 ಕೋ. ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸಿ ಶಿವರಾತ್ರಿಯ ದಿನದಂದು ಮರು ಲೋಕಾರ್ಪಣೆಗೊಳಿಸುವ ಸದವಕಾಶ ನನಗೆ ಲಭ್ಯವಾಯಿತು ಎಂದು ಹೇಳಿದರು.
ನಂತರ ಶಿವಗಿರಿಗೆ ತೆರಳಿದ ಅವರು, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಟ, ನಿರ್ಮಾಪಕ ಬಸಂತಕುಮಾರ ಪಾಟೀಲ ಅವರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ನಗರದಲ್ಲಿರುವ ಸದಾಶಿವ ಚಿಕ್ಕರೆಡ್ಡಿ ಅವರ ನಿವಾಸಕ್ಕೆ ಅಲ್ಲಿ ವಾಸ್ತವ್ಯವಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಮಠದ ಜಗದ್ಗುರು ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರನ್ನು ಭೇಟಿ ಮಾಡಿ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಮಾಜಿ ಉಪಮೇಯರ್ ದಿನೇಶ ಹಳ್ಳಿ ಮುಖಂಡ ಚಂದ್ರಕಾಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

