ಉದಯರಶ್ಮಿ ದಿನಪತ್ರಿಕೆ
ಬಸವನಭಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಬಸ್ ನಿಲ್ದಾಣದಲ್ಲಿ ಮೂರು-ನಾಲ್ಕು ದಿನಗಳಿಂದ ಇದ್ದ ಮಾನಸಿಕವಾಗಿ ನೊಂದ ಅಂದಾಜು 55 ವಯಸ್ಸಿನ ಮಹಿಳೆಯ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿಲ್ಪಾ ಹಿರೇಮಠ ಭೇಟಿ ನೀಡಿ ಈ ಮಹಿಳೆಯನ್ನು ವಿಜಯಪುರದ ಸ್ವಾಧಾರ ಕೇಂದ್ರಕ್ಕೆ ಕರೆದುಕೊಂಡು ಹೋದರು.
ಈ ಕುರಿತು ಅಧಿಕಾರಿ ಶಿಲ್ಪಾ ಹಿರೇಮಠ ಅವರು ಈ ಮಹಿಳೆಯು ಕಲಬುರಗಿ ಜಿಲ್ಲೆಯ ಮೂಲದವಳಾಗಿದ್ದಾಳೆ. ಇವಳು ಮನೆಯಲ್ಲಿ ಕೆಲ ಕಾರಣಗಳಿಂದ ಮನನೊಂದು ಮನೆ ತೊರೆದು ಬಂದಿದ್ದಾಳೆ. ಸಧ್ಯಕ್ಕೆ ಇವಳನ್ನು ಆರೋಗ್ಯದ ಹಿತ ದೃಷ್ಟಿಯಿಂದ ಸ್ವಾಧಾರ ಕೇಂದ್ರದಲ್ಲಿ ಬಿಡಲಾಗುವದು. ಕೇಂದ್ರದವರು ಇವಳ ಮನೆಯವರನ್ನು ಸಂಪರ್ಕಿಸಿ ಅವಳ ಸಮಸ್ಯೆಯನ್ನು ಪರಿಹರಿಸಿ ನಂತರ ಮನೆಗೆ ಕಳುಹಿಸಿಕೊಡುತ್ತಾರೆ ಎಂದು ಪತ್ರಿಕೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಿದ್ದು ಮೇಟಿ, ಆನಂದ ಕಾಖಂಡಕಿ, ಈರಯ್ಯ ಹಿರೇಮಠ, ಬಸು ತೆಲಗಿ, ಯಲ್ಲಪ್ಪ ಕೋಲಕಾರ, ಮಂಜು ಗುಂಡಾನವರ, ಶಿವು ಗುಂಡಾನವರ ಇತರರು ಇದ್ದರು.

