ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬೆಳಗಾವಿ ಗಡಿಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಮರಾಠಿ ಮಾತನಾಡು ಎಂದು ಹಲ್ಲೆ ಮಾಡಿದ ಘಟನೆ ಖಂಡನೀಯ ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಬಸ್ ನಿರ್ವಾಹಕ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆ ಕೇಸ್ ದಾಖಲೆ ಮಾಡಿದ ಪೊಲೀಸರ ನಡೆಯು ಖಂಡನೀಯ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಮಸಿ ಹಚ್ಚಿ ಚಾಲಕರ ಮೇಲೆ ಹಲ್ಲೆ ಮಾಡಿ ಅವಮಾನಿಸುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕರ್ನಾಟಕದ ಬಸ್ ಗಳನ್ನು ತಡೆದು ಚಾಲಕರಿಗೆ ನಿಂದಿಸುವುದು. ಅವರ ಮೇಲೆ ಹಲ್ಲೆ ಮಾಡುವುದು ನೋಡಿದರೆ ನಾವು ಯಾವ ದೇಶದಲ್ಲಿ ಇದ್ದೇವೆ ಅನ್ನಿಸುತ್ತಿದೆ. ನಾವೆಲ್ಲ ಭಾರತೀಯರು ಅನ್ನುವ ಪ್ರಜ್ಞೆ ಇಲ್ಲದೆ ನಮ್ಮ ದೇಶದ ಒಕ್ಕೂಟದ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ನಮ್ಮ ಕರ್ನಾಟಕದ ಚಾಲಕರ ಮೇಲೆ ಹಲ್ಲೆ ಮಾಡುವ ಶಿವಸೇನೆಯ ನಾಲಾಯಕ ಗುಂಡಾಗಳ ಮೇಲೆ ಮಹಾರಾಷ್ಟ್ರ ಸರ್ಕಾರ ಕೂಡಲೇ ಕ್ರಮ ತೆಗೆದು ಕೊಳ್ಳಬೇಕು. ಕೇಂದ್ರದ ಮಾನವ ಹಕ್ಕುಗಳ ಇಲಾಖೆ ಕೂಡಲೇ ಮರಾಠಿ ಪುಂಡರ ಮೇಲೆ ಸೊಮೋಟೊ ಕೇಸಗಳನ್ನು ದಾಖಲೆ ಮಾಡಿಕೊಂಡು ಆ ಪುಂಡರನ್ನು ಒದ್ದು ಜೈಲಿಗೆ ಹಾಕಬೇಕು. ನಮ್ಮ ರಾಜ್ಯ ಸರ್ಕಾರ ಕೂಡಲೇ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಏಕೆಂದರೆ ಮಹಾರಾಷ್ಟ್ರ ರಾಜ್ಯದ ಗಡಿ ಜಿಲ್ಲೆಗಳಾದ ಸೋಲಾಪುರ. ಕೊಲ್ಲಾಪುರ. ಸಾಂಗ್ಲಿಯ ಮಾರುಕಟ್ಟೆ ಹಾಗೂ ಆಸ್ಪತ್ರೆಗಳು ನಡೆಯುತ್ತಿರುವುದೇ ಕನ್ನಡಿಗರಿಂದ ಅನ್ನುವುದನ್ನು ಮಹಾರಾಷ್ಟ್ರ ಸರ್ಕಾರ ತಿಳಿದುಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ದಾಳಿ ಮುಂದುವರೆದರೆ ಕರ್ನಾಟಕಕ್ಕೆ ಬರುವ ಮಹಾರಾಷ್ಟ್ರದ ವಾಹನಗಳನ್ನು ನಾವು ತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

