ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಘೋಣಸಗಿ ತಾಂಡಾ ನಂ 01 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಮಂಗಳವಾರ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಶಾಲಾ ವಾತಾವರಣ ಹಾಗೂ ಭೌತಿಕ ಸೌಲಭ್ಯ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ಮಕ್ಕಳ ವರ್ಗ ಕೋಣೆಗೆ ತೆರಳಿದ ಅವರು ನಲಿಕಲಿ ಮಕ್ಕಳಿಗೆ ಸರಳ ಓದು, ಸರಳ ಶಬ್ದ ಹಾಗೂ ಗಣಿತದ ಮೂಲಕ್ರೀಯೆಗಳ ಮೂಲಕ ಸರಳ ಲೆಕ್ಕಗಳನ್ನು ಮಕ್ಕಳಿಂದ ಮಾಡಿಸಿದರು. ನಾಲ್ಕು ಮತ್ತು ಐದನೇ ತರಗತಿ ಮಕ್ಕಳಿಗೆ ಸರಳ ಇಂಗ್ಲೀಷ ಪದಗಳು ಗುಣಾಕಾರ, ಭಾಗಾಕಾರ ಲೆಕ್ಕಗಳನ್ನು ಮಕ್ಕಳಿಂದ ಮಾಡಿಸಿ ವಿಧ್ಯಾರ್ಥಿಗಳ ಜೊತೆ ಸಂವಾದಿಸಿದರು.
ಶಾಲಾ ಅಂದ ಚಂದ ಗೋಡೆ ಬರಹ ಕಂಡು ಹರ್ಷವ್ಯಕ್ತಪಡಿಸಿ ಪಠ್ಯ ಪುಸ್ತಕದ ಬಹುತೇಕ ಎಲ್ಲ ವಿಷಯಗಳನ್ನು ಗೋಡೆಯ ಮೇಲೆ ಬರಹದ ರೂಪದಲ್ಲಿರುವದರಿಂದ ಮಕ್ಕಳಿಗೆ ಪ್ರತಿದಿನ ನೋಡಿ ಕಲಿಯಲು ತುಂಬಾ ಅನೂಕೂಲವಾಗುತ್ತದೆ. ಶಾಲಾ ಆವರಣದಲ್ಲಿ ಗಿಡಗಳು, ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಗೇಟ್ ಎಲ್ಲ ಮೂಲಭೂತ ಸೌಲಭ್ಯ ಇರುವದರಿಂದ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಹೊಂದಿದ ಶಾಲೆಯಾಗಿದೆ ಎಂದರು.
ಮಕ್ಕಳ ಕಲಿಕೆಗೆ ಅನೂಕೂಲವಾಗಲು ಯಾರಿಂದಲೂ ಹಣಕಾಸಿನ ನೆರವು ನಿರೀಕ್ಷಿಸದೇ ಸ್ವತಃ ₹ 1 ಲಕ್ಷಕ್ಕೂ ಅಧಿಕ ಹಣ ತಮ್ಮ ವೇತನದಿಂದ ಖರ್ಚು ಮಾಡಿದ ಶಿಕ್ಷಕ ಪಿ.ಎಸ್.ಗದ್ಯಾಳ ಅವರ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಹಿಂದುಳಿದ ಸಮುದಾಯದ ತಾಂಡಾ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಶ್ಲಾಘನೀಯ ಎಂದು ಖುಷಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಪ್ರಭು ಬಿರಾದಾರ, ಶಿಕ್ಷಕ ರಾಜು ಹಟ್ಟೆನವರ ಇದ್ದರು.

