ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಮರ್ಪಕ ಗುಣಮಟ್ಟದ ವಿದ್ಯುತ್ ಪೂರೈಕೆ ಹಾಗೂ ಕೈಬಿಟ್ಟಿರುವ ಹಿಂದಿನ ಯೋಜನೆಗಳನ್ನು ಪುನರ್ ಆರಂಭಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಕೈಗೊಂಡರು.
ಪಟ್ಟಣದ ಹೆಸ್ಕಾಂ ಕಚೇರಿ ಮುಂದೆ ಸೋಮವಾರ ಬೆಳಿಗ್ಗೆಯಿಂದ ಪ್ರತಿಭಟನೆ ಆರಂಭಿಸಿ ವಿವಿಧ ಬೇಡಿಕೆಗಳ ಪರಿಹಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೆ ರಾತ್ರಿ ಸಮಯ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಹಾಗೂ ಜಾನುವಾರಗಳ ಸುರಕ್ಷತೆಗಾಗಿ ಸಿಂಗಲ್ ಫೇಸ್ ಅಥವಾ ಟೂ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಯುಎನ್‌ಆಯ್‌ಪಿ ಅಂತಹ ಮೊದಲು ಆರಂಭಿಸಿದ ಯೋಜನೆಗಳನ್ನು ಪುನಃ ಆರಂಭಿಸಬೇಕು. ಹಳೆಯದಾದ ಕಂಬಗಳು, ವೈಯರ್‌ಗಳನ್ನು ಬದಲಾಯಿಸಬೇಕು, ಅಕ್ರಮ ಸಕ್ರಮಕ್ಕೆ ರೈತರು ಸಲ್ಲಿಸಿದ ಅರ್ಜಿಗಳ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದರು.
ರೈತ ಮುಖಡರಾದ ಅಜೀಜ್ ಯಲಗಾರ, ಸಾಹೇಬಗೌಡ ದಾನಗೊಂಡ, ವಿರೇಶ ಕುದರಿ, ಸಂಗನಗೌಡ ಬಿರಾದಾರ, ರೇಣುಕಾ ಪಾಟೀಲ ಮಾತನಾಡಿದರು.
ಪ್ರತಿಭಟನೆ ಕಾರಣವಾಗಿ ರೈತರು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯುತ್ ನಿಲುಗಡೆಗೊಳಿಸಿದ ಕಾರಣ ಸಂಜೆ ಸಾರ್ವಜನಿಕರು ವಿದ್ಯುತ್ ಪೂರೈಕೆ ಇಲ್ಲದೇ ಪರದಾಡುವಂತಾಯಿತು. ಈ ಕುರಿತು ಹೆಸ್ಕಾಂ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿದರೂ ಯಾರೊಬ್ಬರು ಸ್ಪಂದಿಸದೇ ಇರುವುದು ಜನತೆಯ ಬೇಸರಕ್ಕೆ ಕಾರಣವಾಯಿತು. ನಂತರ ಹಿರಿಯ ಅಧಿಕಾರಿಗಳು ರೈತರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದಾಗ ಪ್ರತಿಭಟನೆ ಕೊನೆಗೊಂಡು ವಿದ್ಯುತ್ ಪೂರೈಕೆ ಆರಂಭಗೊಂಡಿತು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮು ದೇಸಾಯಿ, ಶರಣಗೌಡ ಬಿರಾದಾರ, ನಾಗಣ್ಣ ಬಿರಾದಾರ, ದಶರಥ ನಾಯ್ಕೋಡಿ, ನಾಗೇಶ ಲೋಣಿ, ಸಂಪತ್ ಜಮಾದಾರ, ಶಿವಪ್ಪ ವಸ್ತçದ, ಸುನೀಲ ದೇಸಾಯಿ ಸೇರಿದಂತೆ ಸಾರ್ವಜನಿಕರು ಇದ್ದರು.

