ವಿಜಯಪುರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅತಿ ಹೆಚ್ಚು ಜಿಲ್ಲೆಯಲ್ಲಿ ಉತ್ತಮವಾದ ಮಾಲ್ದಂಡಿ ಜೋಳ ಬೆಳೆಯುತ್ತಿದ್ದು ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳ ಖರೀದಿಸುವ ಕುರಿತು ಜಿಲ್ಲೆಯ ರೈತರಲ್ಲಿ ಸೂಕ್ತವಾದ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರೈತರು ಬೆಂಬಲ ಬೆಲೆಯಡಿ ಜೋಳ ಮಾರಾಟಕ್ಕೆ ನೊಂದಣಿ ಮಾಡಿಸುವಂತೆ ಐಇಸಿ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ, ನೋಂದಣಿಗೆ ಕ್ರಮ ವಹಿಸಿ ಬೆಂಬಲ ಬೆಲೆಯಡಿ ಜೋಳ ಖರೀದಿಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಖಾತಾ ನೀಡಲು ಅಭಿಯಾನವನ್ನು ಹಮ್ಮಿಕೊಂಡಿದ್ದು ಸೂಕ್ತ ಪರಿಶೀಲನೆ ನಡೆಸಿ ಇ-ಖಾತಾ ನೀಡಲು ಕ್ರಮವಹಿಸಬೇಕು. ಐತಿಹಾಸಿಕ ಸ್ಮಾರಕ, ರಾಜ್‌ಕಾಲುವೆ ಸೇರಿದಂತೆ ಒತ್ತುವರಿಯಾದ ಜಾಗಗಳಿಗೆ ಇ-ಖಾತೆ ಒದಗಿಸದಂತೆ ಸೂಕ್ತ ಎಚ್ಚರ ವಹಿಸಬೇಕು. ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಪಟ್ಟಿ ಸಿದ್ಧಪಡಿಸಿಕೊಂಡು ಇ-ಖಾತಾ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ ಅನಾನೂಕೂಲವಾಗದಂತೆ ನೋಡಿಕೊಂಡು ವಿದ್ಯಾರ್ಥಿಗಳ ಶಾಲೆಯ ಸಮಯಕ್ಕನುಗುಣವಾಗಿ ಕಲ್ಯಾಣ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸೂಕ್ತ ಬಸ್‌ಗಳ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಭಾಗದ ಕೆಲವು ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರಿಗೆ ನಿಗಮದ ಅಧಿಕಾರಿಗಳು ಸಭೆ ನಡೆಸಿ, ಸೂಕ್ತವಾದ ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಬಸ್‌ಗಳ ವ್ಯವಸ್ಥೆಗೆ ಕ್ರಮ ವಹಿಸಬೇಕು.
ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅವ್ಯವಸ್ಥೆಯಿಂದ ಸಾರ್ವಜನಿಕರು ಶೌಚಾಲಯಗಳ ಬಳಕೆಗೆ ಹಿಂದೇಟು ಹಾಕುತ್ತಾರೆ. ಇದರಿಂದ ಸುತ್ತಮುತ್ತಲಿನ ಪರಿಸರವೂ ಹಾಳಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ವ್ಯವಸ್ಥಿತ ನಿರ್ವಹಣೆಗೆ ಕ್ರಮ ವಹಿಸಬೇಕು. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಶಾಸಕರ ಮನವಿಯಂತೆ ನಿಗದಿತ ಸ್ಥಳಗಳಲ್ಲಿ ಬಸ್‌ಗಳ ನಿಲುಗಡೆ ಕ್ರಮ ವಹಿಸಿ ಅನುಕೂಲ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಅನಂದ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಮೀನುಗಾರರಿಗೆ ಪರಿಕರ ವಿತರಣೆ
ಸಭೆಗೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ೨೦೨೪-೨೫ನೇ ಸಾಲಿನ ಒಳನಾಡು ಮೀನುಗಾರಿಕೆ ಅಭಿವೃದ್ದಿಗೆ ಸಹಾಯ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯಲು ಬಲೆ, ಸಿಸ್, ದಾರ, ಹೆಡರೂಪ ಇತರೆ ಪರಿಕರವುಳ್ಳ ಉಚಿತ ಮೀನು ಸಲಕರಣೆ ಕಿಟ್ಟಗಳನ್ನು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೫ ಜನ ವಿವಿಧ ಸಾಧನ ಸಲಕರಣೆಗಳನ್ನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗಕ್ಕಾಗಿ ತಲಾ ೨೦ ಲಕ್ಷ ರೂ.ಗಳ ಚೆಕ್‌ನ್ನು ೫ ಜನರಿಗೆ ವಿತರಿಸಿದರು.

ಗುಂಟಾ ಲೇಔಟ್ ನಿರ್ಮಾಣಕ್ಕೆ ಕಡಿವಾಣ
ಜಿಲ್ಲೆಯಲ್ಲಿ ಗುಂಟಾ ಲೇಔಟ್ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಕಡಿಮೆ ಹಣದಲ್ಲಿ ಗುಂಟಾ ನಿವೇಶನಗಳು ಬರುವುದರಿಂದ ಜೀವನಕ್ಕೊಂದು ಸೂರು ನಿರ್ಮಿಸಿಕೊಳ್ಳುವ ಕನಸು ಕಂಡು ಬಡವರು ಇಂತಹ ಗುಂಟಾ ನಿವೇಶನಗಳನ್ನು ಪಡೆದುಕೊಂಡಿರುತ್ತಾರೆ. ಇಂತಹ ಬಡವರಿಗೆ ಯಾವುದೇ ತೊಂದರೆ ನೀಡಬಾರದು, ಆದರೆ ಗುಂಟಾ ನಿವೇಶನ ನಿರ್ಮಾಣ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಮೂಲಕ ಗುಂಟಾ ಲೇಔಟ್‌ಗಳ ಕಡಿವಾಣ ಹಾಕಬೇಕು. ಇನ್ನೂ ಮುಂದೆ ಗುಂಟಾ ಲೇಔಟ್‌ಗಳು ನಿರ್ಮಾಣವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಸಚಿವ ಡಾ.ಎಂ.ಬಿ.ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ
ಜಿಲ್ಲೆಯಾದ್ಯಂತ ಅಕ್ರಮ ಮದ್ಯಮಾರಾಟ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಗರದಿಂದ ಹಳ್ಳಿಯವರೆಗಿನ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೂಡಲೇ ಕಾರ್ಯಪ್ರವೃತ್ತರಾಗಿ ಸಂಪೂರ್ಣ ಕಡಿವಾಣಕ್ಕೆ ಮುಂದಾಗಬೇಕು. ನಾನು ಸೂಚನೆ ಕೊಟ್ಟ ಮೇಲೆ ಕ್ರಮಕ್ಕೆ ಮುಂದಾಗುವುದು ಎಷ್ಟು ಸರಿ. ನಿಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು. ಕೂಡಲೇ ಅಕ್ರಮ ಮದ್ಯ ಮಾರಾಟದ ಕಡಿವಾಣಕ್ಕೆ ಮುಂದಾಗಿ, ಇಲ್ಲವಾದಲ್ಲಿ ಸಾರ್ವಜನಿಕರಿಂದಲೇ ಸೀಜ್ ಮಾಡುವ ವ್ಯವಸ್ಥೆ ಮಾಡುತ್ತೇನೆ. ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ. ಇದಕ್ಕೆ ಆಸ್ಪದ ನೀಡದೇ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಒಂದೇ ಒಂದು ಪ್ರಕರಣ ಇನ್ನೂ ಮುಂದೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.

“ಈಗಾಗಲೇ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಹಲವು ಕಡೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ವಾರದ ಸಂತೆಗಳಲ್ಲಿ ಮಾರಾಟವಾಗುತ್ತಿರುವುದನ್ನು ಬಂದ್ ಮಾಡಿಸಲಾಗಿದೆ. ಇನ್ನೂ ಮುಂದೆಯೂ ಸಹ ಯಾವುದೇ ಅಕ್ರಮ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರ ವಹಿಸಲಾಗುವುದು.”
– ಲಕ್ಷ್ಮಣ ನಿಂಬರಗಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯಪುರ

ಬೆಂಬಲ ಬೆಲೆಯಡಿ ಜೋಳ ಮಾರಾಟಕ್ಕೆ ರೈತರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಿ
ಜವಳಿ, ಕಬ್ಬು ಅಭಿವೃದ್ದಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯದ ಇತರೆ ಜಿಲ್ಲೆಗಳಿಗಿಂತ ಅತಿ ಹೆಚ್ಚು ಹಾಗೂ ಉತ್ತಮವಾದ ಮಾಲ್ದಂಡಿ ಜೋಳ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಿದ್ದರೂ ಸಹ ಬೆಂಬಲ ಬೆಲೆಯಡಿ ಜೋಳ ಮಾರಾಟಕ್ಕೆ ರೈತರು ಹಿಂದೇಟು ಹಾಕಿದಂತೆ ಸೂಕ್ತ ತಿಳುವಳಿಕೆ ನೀಡಿ, ಇದಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಮಾರುಕಟ್ಟೆಯಲ್ಲಿ ರೈತರು ಜೋಳವನ್ನು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ೬೦೦ ರಿಂದ ೭೦೦ ರೂ. ನಷ್ಟವಾಗುತ್ತಿದೆ. ಈ ಅಂತರದ ಕುರಿತು ರೈತರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಿ, ಬೆಂಬಲ ಬೆಲೆಯಡಿ ಜೋಳ ಖರೀದಿಸುವ ಕುರಿತು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಿ ತಿಳುವಳಿಕೆ ಮೂಡಿಸುವಂತೆ ಸೂಚನೆ ನೀಡಿದರು.

