ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ, ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಮೃತ ಯೋಜನೆ ೨.೦ ಅಡಿಯಲ್ಲಿ ಅಂದಾಜು ೩,೫೦೦ ನಲ್ಲಿ ಸಂಪರ್ಕ, ಭಜನಾ ಮಂಟಪದ ನವೀಕರಣ, ಅಗಸಿ ದ್ವಾರದ ಕಾಮಗಾರಿ ಸೇರಿದಂತೆ ಪಟ್ಟಣಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಮೂಲಕ ಪಟ್ಟಣವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಜವಳಿ, ಕಬ್ಬು ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ವಿಠ್ಠಲ ಮಂದಿರದ ಹತ್ತಿರ ಮನಗೂಳಿ ಪಟ್ಟಣ ಪಂಚಾಯಿತಿಯ ಸನ್ ೨೦೨೩-೨೪ ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಅಂದಾಜು ಮೊತ್ತ ೨೦ ಲಕ್ಷ ರೂ.ಯಲ್ಲಿ ಕೈಗೊಂಡಿರುವ ವಿಠ್ಠಲ ಮಂದಿರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ ಮಾಡುವ ಜೊತೆಗೆ ಅಲ್ಲಿ ವಾಯು ವಿಹಾರ ಟ್ರ್ಯಾಕ್, ಮಕ್ಕಳಿಗೆ ಆಟಿಕೆ ಸಾಮಾನುಗಳ ಅಳವಡಿಕೆ, ಉದ್ಯಾನವನ ಸೇರಿದಂತೆ ಅದೊಂದು ಪ್ರವಾಸಿ ತಾಣವನ್ನಾಗಿ ಮಾಡುವ ಕಾಮಗಾರಿ ಅಂದಾಜು ರೂ. ೫.೫೦ ಕೋಟಿ ರೂ. ಅನುದಾನದಲ್ಲಿ ಈಗಾಗಲೇ ಆರಂಭವಾಗಿದೆ. ರೂ.೨೫ ಲಕ್ಷ ಅನುದಾನದಲ್ಲಿ ಆಕರ್ಷಕವಾದ ಪಟ್ಟಣದ ಅಗಸಿ ದ್ವಾರ ಬಾಗಿಲು ಕಾಮಗಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದ ಅಭಿವೃದ್ಧಿ ೧.೩೫ ಲಕ್ಷ ವೆಚ್ಚದಲ್ಲಿ, ಘನತ್ಯಾಜ್ಯ ವಿಲೇವಾರಿ ಘಟಕದ ಆವರಣಗೋಡೆ ಕಾಮಗಾರಿ ರೂ.೧.೪೦ ಲಕ್ಷ ವೆಚ್ಚದಲ್ಲಿ, ಪಟ್ಟಣದ ಭಜನಾ ಮಂಟಪದ ನವೀಕರಣಕ್ಕಾಗಿ ರೂ.೨೫ ಲಕ್ಷ ವೆಚ್ಚ ಸೇರಿದಂತೆ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ ಪಟ್ಟಣದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿ ಮುಕ್ತಾಯವಾಗಿವೆ. ಮುಂಬರುವ ದಿನಗಳಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಟ್ಟಡವನ್ನು ವಿಜಯಪುರ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಅಂದಾಜು ೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಈ ಕಟ್ಟಡದ ವಿನ್ಯಾಸದ ಅನುಮತಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಈ ಕಾಮಗಾರಿ ಆರಂಭವಾಗಲಿದೆ. ವಿಠ್ಠಲ ಮಂದಿರದ ಹತ್ತಿರ ನಿರ್ಮಾಣವಾಗುವ ಸಮುದಾಯ ಭವನವನ್ನು ನಿಗದಿತ ಅವಧಿಯಲ್ಲಿ ಗುತ್ತಿಗೆದಾರರು ಗುಣಮಟ್ಟದಿಂದ ನಿರ್ಮಿಸಬೇಕು. ಇಲ್ಲಿನ ಜನರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಇದರ ಮೇಲಂಸ್ತು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಗುಜಗೊಂಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಐ.ರೇವೂಕರ, ಪಟ್ಟಣ ಪಂಚಾಯಿತಿ ಅಭಿಯಂತರ ಸೋಮಶೇಖರ ತುಪ್ಪದ, ಪಟ್ಟಣ ಪಂಚಾಯಿತಿ ಸದಸ್ಯರಾದ ಭಾಗ್ಯರಾಜ ಸೊನ್ನದ, ಡಾ.ರಾಮಣ್ಣ ಪತ್ತಾರ, ಪ್ರಕಾಶ ಮನಗೂಳಿ, ಅಜೀತ ಜಾನಕರ, ತಿಪ್ಪಣ್ಣ ಖ್ಯಾತನ್ನವರ, ಡಾ.ಎಂ.ಡಿ.ಮೇತ್ರಿ, ರಮೇಶ ಫಿರಗಾ, ಸಲೀಂ ಮಕಾನದಾರ, ಮುಖಂಡರಾದ ಜಿ.ಕೆ.ಕುಲಕರ್ಣಿ, ಪಿ.ಸಿ.ಕುಲಕರ್ಣಿ, ಜಿನೇಶ ಪವಾರ, ಬಸಗೊಂಡ ಚಿಮ್ಮಲಗಿ, ಶಿವಾಜಿ ಬೋಸ್ಲೆ, ಗುತ್ತಿಗೆದಾರ ರಾಜು ಯಾದವಾಡ ಇತರರು ಇದ್ದರು.

