ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯು.ಕೆ.ಪಿ.) ಅಡಿ ಕೆಲಸ ಮಾಡುತ್ತಿರುವ ಭೂಮಾಪಕರ ವರ್ಗಾವಣೆಯನ್ನು ರದ್ದುಪಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿದೆ.
ಯು.ಕೆ.ಪಿ.ಯಲ್ಲಿ ಕಳೆದ ೧೫ ವರ್ಷಗಳಿಂದ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದವರನ್ನು ಸರ್ಕಾರ ಇತ್ತೀಚೆಗೆ ವರ್ಗಾವಣೆ ಮಾಡಿದೆ. ಇದರಿಂದ ರೈತರಿಗೆ ಪರಿಹಾರ ವಿತರಣೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಬಾಗಲಕೋಟ ನವನಗರದಲ್ಲಿರುವ ಪುನರ್ವಸತಿ, ಪುನರ್ನಿರ್ಮಾಣ ಮತ್ತು ಭೂಸ್ವಾಧೀನ (ಕ್ರ.ಮ.ಯೋ.) ಪದನಿಮಿತ್ಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಲಸಂಪನ್ಮೂಲ ಸಚಿವರಿಗೆ ಬರೆದ ಪತ್ರವನ್ನು ಗುರುವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯವಸ್ಥಾಪಕ ವಿ.ಪಿ. ಹಡ್ಲಗೇರ್ ಅವರಿಗೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅರವಿಂದ ಕುಲಕರ್ಣಿ, “ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ಯು.ಕೆ.ಪಿ. ಅಡಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಜೀವನಾಧಾರವೇ ನಷ್ಟವಾಗಿದೆ. ಜೆ.ಎಂ.ಸಿ. ಸರ್ವೇ, ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಪಾವತಿ, ಪುನರ್ವಸತಿ ಸೇರಿ ಹಲವು ಕಾಮಗಾರಿಗಳು ಬಾಕಿ ಇವೆ. ಈ ಹಂತದಲ್ಲಿ ಅನುಭವಿ ಭೂಮಾಪಕರನ್ನು ವರ್ಗಾಯಿಸಿದರೆ ಹೊಸದಾಗಿ ಬರುವವರಿಗೆ ಹಳೆಯ ಕಡತ, ಮಾಪನ ಹಾಗೂ ಪ್ರಕರಣಗಳನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಇದರಿಂದ ರೈತರಿಗೆ ಪರಿಹಾರ ದೊರೆಯುವುದು ಮತ್ತಷ್ಟು ವಿಳಂಬವಾಗುತ್ತದೆ” ಎಂದು ಹೇಳಿದರು.
“ಸರ್ಕಾರ ಈಗಾಗಲೇ ಯು.ಕೆ.ಪಿ.ಗೆ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿದೆ. ಈಗಾಗಲೇ ನಡೆದ ಜಂಟಿ ಮಾಪನ ಮತ್ತು ಸರ್ವೇ ಕಾರ್ಯಗಳನ್ನು ಮತ್ತೆ ಪರಿಶೀಲಿಸಬೇಕಾದರೆ ಸಮಯ ಮತ್ತು ಸಂಪನ್ಮೂಲ ವ್ಯರ್ಥವಾಗುತ್ತದೆ. ಯೋಜನೆಯ ಅನುಷ್ಠಾನವೂ ವಿಳಂಬವಾಗುತ್ತದೆ. ರೈತರ ಹಿತದೃಷ್ಟಿಯಿಂದ ಭೂಮಾಪಕರ ಸೇವೆ ನಿರಂತರವಾಗಿರಬೇಕು. ಆದ್ದರಿಂದ ವರ್ಗಾವಣೆ ಮಾಡಿರುವ ಎಲ್ಲ ಭೂಮಾಪಕರನ್ನು ಮರಳಿ ಯು.ಕೆ.ಪಿ.ಗೆ ನಿಯೋಜಿಸಬೇಕು” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಮನಪ್ಪ ಚಿಗರಿ, ಅಮೀನ ಪಟೇಲ್ ಬಿರಾದಾರ, ಕಾಸಪ್ಪ ಇವಣಗಿ, ಸೋಮಪ್ಪ ಚಿಗರಿ, ಸೋಮಪ್ಪ ಇವಣಗಿ, ಕುಡ್ಲಪ್ಪ ಚಿಗರಿ, ಸಿದ್ದಪ್ಪ ಚಿಗರಿ, ಸಿದ್ಧನಗೌಡ ಇಸ್ಲಾಂಪೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

