ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿವಿಧ ಇಲಾಖೆಗಳಿಂದ ಮಾಡಿದ ಕಾಮಗಾರಿಗೆ ಮೂರು ತಿಂಗಳಾದರೂ ಹಣ ಸಂದಾಯವಾಗಿಲ್ಲ. ಒಂದು ತಿಂಗಳ ಗಡುವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅರುಣ ಮಠ ಹೇಳಿದರು.
ಸಿಂದಗಿ ಪಟ್ಟಣದ ಸಂಗಮೇಶ್ವರ ದೇವಾಲಯದಲ್ಲಿ ತಾಲೂಕು ಗುತ್ತಿಗೆದಾರರ ಸಂಘದ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಮಗಾರಿ ಪೂರ್ಣಗೊಳಿಸಿದರೂ ಸರಕಾರ ಹಣ ಸಂದಾಯ ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಕಾರಣ ಫೆ.೧೪ರಂದು ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬಳಿಕ ಜಿಲ್ಲಾಧಿಕಾರಿಗಳಿಗೆ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಗುವುದು. ಸದರಿ ಬೃಹತ್ ಪ್ರತಿಭಟನೆಯಲ್ಲಿ ಸಿಂದಗಿ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಈ ವೇಳೆ ಹಿರಿಯ ಗುತ್ತಿಗೆದಾರ ಮಹಾದೇವಪ್ಪ ಗುಡ್ಲಿಮನಿ ಮಾತನಾಡಿ, ವಯಕ್ತಿಕ ಅಥವಾ ರಾಜಕೀಯ ಕಾರಣದಿಂದ ಈ ಪ್ರತಿಭಟನೆ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಸರಕಾರ ಗುತ್ತಿಗೆದಾರರ ಹಣ ಸಂದಾಯ ಮಾಡುತ್ತಿಲ್ಲ. ಇಲ್ಲಿಯವರೆಗೂ ಸರಕಾರ ಪ್ರತಿಶತ ಶೇ.೧೦ರಷ್ಟು ಬಿಲ್ಲ್ ಪಾವತಿ ಮಾಡಿದರೆ ಗುತ್ತಿಗೆದಾರರ ಬಿಲ್ಲ್ ಬಾಕಿ ಉಳಿಯುತ್ತಿರಲಿಲ್ಲ. ಗುತ್ತಿಗೆದಾರರು ಸಂಕಷ್ಟದಲ್ಲಿರುವ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಆರ್.ರೋಡಗಿ, ತಾಂತ್ರಿಕ ಸಲಹೆಗಾರ ಎಲ್.ಡಿ.ಮಡಗೊಂಡ, ಉಪಾಧ್ಯಕ್ಷ ಎಸ್.ಆಯ್.ಡೋಣು ಆಯ್.ಎಮ್.ಪಟ್ಟಣಶೆಟ್ಟಿ, ಎಸ್.ಎಮ್.ಉಳ್ಳಾಗಡಿ, ಆರ್.ಎಮ್.ಮಾವಿನಗಿಡದ, ಆರ್.ಬಿ.ಅಸ್ಕಿ, ಸಿಂದಗಿ ತಾಲೂಕಾಧ್ಯಕ್ಷ ಮುತ್ತು ಮುಂಡೇವಾಡಗಿ, ಉಪಾದ್ಯಕ್ಷ ಬಿ.ಆಯ್.ಬಿಜ್ಜರಗಿ, ರಾಮನಗೌಡ ಬಿರಾದಾರ, ಪುಂಡಲೀಕ ಬಿರಾದಾರ, ಮಹಾಂತೇಶ ಕೋರಿ, ಗುತ್ತಿಗೆದಾರರಾದ ವ್ಹಿ.ಎಸ್.ಗಂಗನಳ್ಳ, ವಿ.ಎಮ್.ಸಿಂದನಕೇರಿ, ಎಸ್.ಸಿ.ಕರ್ನಾಳ, ಬಿ.ಎಮ್.ಪಾಟೀಲ, ಸತೀಶಗೌಡ ಬಿರಾದಾರ, ದಯಾನಂದ ಬಿರಾದಾರ, ಸಿದ್ದು ಶೀಲವಂತ, ಬೀಮು ನಂದಶೇಟ್ಟಿ, ವಾಯ್.ಎಲ್.ಬಳೂಂಡಗಿ, ನರಸು ಚವ್ಹಾಣ ಸೇರಿದಂತೆ ಅನೇಕರಿದ್ದರು.

