ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದು ಸಮಾಜಕ್ಕೆ ಹಿರಿಯರ ಅನುಭವದ ಮಾರ್ಗದರ್ಶನದ ಅಗತ್ಯತೆ ಇದೆ. ಭವಿಷ್ಯತ್ತಿನ ಬಗ್ಗೆ ಬಹಳ ಜನರಿಗೆ ಅರ್ಥವಾಗುತ್ತಿಲ್ಲ. ಅದನ್ನು ತಿಳಿಸುವ ಕೆಲಸವಾಗಬೇಕಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕ ಶನಿವಾರ ಹಮ್ಮಿಲೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ 75 ವರ್ಷ ತುಂಬಿದ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸರ್ಕಾರಿ ಸೇವೆ ಎಂದರೆ ಅದು ದೇವರ ಸೇವೆ ಎಂದು ತಿಳಿದು ನೈತಿಕತೆ, ಆದರ್ಶ ಪ್ರಾಮಾಣಿಕ ಸೇವೆಯೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತಿದ್ದರು. ಇಂದು ಮಕ್ಕಳಿಗಾಗಿ ಗಳಿಕೆ ಮಾಡಿ ಇಡುತಿದ್ದಾರೆ ವಿನಹ ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುತ್ತ ಗಮನ ಹರಿಸುತ್ತಿಲ್ಲ. ದುಶ್ಚಟಗಳು, ಅಪರಾಧಗಳು ನೈತಿಕ ಅದ:ಪತನಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ವೈ.ಬಿ.ಪಟ್ಟಣಶೆಟ್ಟಿ ಮಾತನಾಡಿ, ಹಿರಿಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪ್ರತಿದಿನ ವ್ಯಾಯಾಮ, ವಾಯು ವಿಹಾರ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮಿತವಾದ ಆಹಾರ ಸೇವನೆ ಮಾಡಬೇಕು. ಪ್ರವಚನ, ಸತ್ಸಂಗದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆತ್ಮ ವಿಶ್ವಾಸದೊಂದಿಗೆ ಉತ್ಸಾಹದಿಂದ ಬದುಕು ಸಾಗಿಸಬೇಕು. ಜಗತ್ತಿನಲ್ಲಿ ಎಲ್ಲವೂ ಇದೆ. ಆದರೆ ಶಾಂತಿ, ನೆಮ್ಮದಿ ಇಲ್ಲ. ತರಕಾರಿ, ಹಣ್ಣುಗಳ ರುಚಿ ಬದಲಾಗಿಲ್ಲ. ಆದರೆ ನಾವು ಇಂದು ಕಾಲ ಬದಲಾಗಿದೆ ಎಂದು ಕೊರಗುತ್ತೇವೆ. ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ತಾಲೂಕಿನ ನಿವೃತ್ತ ನೌಕರರು, ಸಭೆ ಸಮಾರಂಭ ನಡೆಸಲು ಪಟ್ಟಣದಲ್ಲಿ ನಿರ್ದಿಷ್ಟ ಸ್ಥಳ ಇಲ್ಲ. ನಿವೃತ್ತ ನೌಕರರ ಸಂಘದ ಕಚೇರಿ ಕಟ್ಟಡದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಚಿವರು ಪ್ರಾಮಾಣಿಕವಾಗಿ ಈಡೇರಿಸುವ ಭರವಸೆ ಇದೆ ಎಂದರು.
ವಕೀಲ ಬಿ.ಕೆ.ಕಲ್ಲೂರ ಮಾತನಾಡಿ, ಹಿರಿಯರು ಬಸವಣ್ಣನವರ ವಚನಗಳಲ್ಲಿರುವ ಮೌಲ್ಯಗಳನ್ನು ಕಿರಿಯರಿಗೆ ತಿಳಿಸಿಕೊಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಹಿರಿಯರನ್ನು ಆರೈಕೆ ಮಾಡುವ ಗುಣ ಬೆಳೆಸಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ಕಾರ್ಯದರ್ಶಿ ಎಸ್.ಕೆ.ಸೋಮನಕಟ್ಟಿ, ನಿಡಗುಂದಿ ತಾಲೂಕಾಧ್ಯಕ್ಷ ರೇವಡಿ ಮಾತನಾಡಿದರು.
ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ.ಬಿರಾದಾರ, ಸಿಂದಗಿ ತಾಲೂಕಾಧ್ಯಕ್ಷ ಎಸ್.ಎನ್.ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸಾಹಿತಿ ಲ.ರು.ಗೊಳಸಂಗಿ, ರೇಣುಕಾ.ಎಚ್ ಇದ್ದರು.
ನಿವೃತ್ತ ಪ್ರಾಚಾರ್ಯ ಸುರೇಶಗೌಡ ಪಾಟೀಲ ಸ್ವಾಗತಿಸಿದರು. ಎಂ.ಜಿ.ಆದಿಗೊಂಡ, ಎಂ.ಬಿ.ತೋಟದ ನಿರೂಪಿಸಿದರು. ಪಿ.ಎಲ್.ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ 75 ವರ್ಷ ತುಂಬಿದ 20ಕ್ಕೂ ಹೆಚ್ಚು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಂಘದ ಪದಾಧಿಕಾರಿಗಳು ಸಚಿವ ಶಿವಾನಂದ ಪಾಟೀಲ ಅವರಿಗೆ ಸಲ್ಲಿಸಿದರು.

