ಶಿರಾಡೋಣ: ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ವ್ಯವಹಾರಿಕ ಜ್ಞಾನ ಬೆಳೆಯಬೇಕು. ಮಕ್ಕಳ ಸಂತೆಯ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು ಅದರ ಒಂದು ಭಾಗವೇ ಮಕ್ಕಳ ಸಂತೆ ಎಂದು ರೇವತಗಾಂವ ಗ್ರಾಪಂ ಉಪಾಧ್ಯಕ್ಷರಾದ ಸುರೇಶ ಬನಸೋಡೆಯವರು ಹೇಳಿದರು.
ಶನಿವಾರದಂದು ಶಿರಾಡೋಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಸಂತೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮಕ್ಕಳನ್ನು ಅಂಗಡಿಗೆ ಕಳುಹಿಸಿದಾಗ ಅಗತ್ಯ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯವನ್ನು ಮಕ್ಕಳು ಹೆಚ್ಚಿಸಿಕೊಳ್ಳಬೇಕು. ಇಂತಹ ಮಕ್ಕಳ ಸಂತೆಗಳು ಪ್ರಾಯೋಗಿಕ ತರಬೇತಿಗಾಗಿ ಉತ್ತಮ ವೇದಿಕೆಯಾಗಿವೆ ಎಂದರು.
ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ವಿಜಯಕುಮಾರ ಸಾತಪುತೆಯವರು ಮಾತನಾಡುತ್ತ. ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಪಠ್ಯೇತರ ಚಟುವಟಿಕೆಯಾಗಿ ಶಾಲೆಯಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತದೆ, ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಪಾಂಡುರಂಗ ಬಗಲಿಯವರು ಮಾತನಾಡುತ್ತ. ಶಾಲಾ ಸಂತೆಯಿಂದ ಕುಟುಂಬದ ದೈನಂದಿನ ವ್ಯಾಪಾರ, ವ್ಯವಹಾರದ ಬಗ್ಗೆ ಮಕ್ಕಳು ಅರಿವು ಬೆಳೆಸಿಕೊಳ್ಳಲು ಅವಕಾಶವಿದೆ, ವ್ಯವಹಾರಿಕ ಜ್ಞಾನದಿಂದ ಮುಂದೆ ಶಿಸ್ತುಬದ್ಧ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಹೊಲಗಳಲ್ಲಿ ಪಾಲಕರು ಬೆಳೆದ ಬದನೆಕಾಯಿ, ಗೆಣಸು, ಬಾಳೆ, ಪೇರಳೆ, ಚಿಕ್ಕು, ಲಿಂಬೆ, ಪಪ್ಪಾಯಿ, ಬೆಂಡೆ, ಹಿರೇಕಾಯಿ, ಸೊತೆಕಾಯಿ, ಅವರೆಕಾಯಿ, ಕಜ್ಜರಿ, ವಿವಿಧ ಸೊಪ್ಪು, ತರಕಾರಿ, ಹಣ್ಣುಗಳು, ಪಾನಿಪುರಿ, ಬೇಲ್‌ಪುರಿ ಸೇರಿದಂತೆ ವಿವಿಧ ತಿಂಡಿ ತಿನಿಸುಗಳನ್ನು ಶಾಲಾ ಸಂತೆಯಲ್ಲಿ ಮಾರಾಟ ಮಾಡಿದರು. ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಸದಸ್ಯರು ಹಣ ಪಾವತಿಸಿ ವಿದ್ಯಾರ್ಥಿಗಳಿಂದ ತರಕಾರಿ, ಹಣ್ಣುಗಳ ಖರೀದಿಸುವ ಮೂಲಕ ವ್ಯವಹಾರಕ್ಕೆ ಸಹಕರಿಸಿದರು.
ವಿದ್ಯಾರ್ಥಿಗಳು ತೂಕ, ಅಳತೆ, ಚಿಲ್ಲರೆ ಕೊಡುವುದು ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ಕಲಿಯಲು ಇದೊಂದು ಉತ್ತಮ ಅವಕಾಶವಾಗಿತ್ತು. ವಿದ್ಯಾರ್ಥಿಗಳು ಸಂತೆಯಲ್ಲಿ ಸಂತಸದಿಂದ ಪಾಲ್ಗೊಂಡು ತಾವು ತಂದ ತರಕಾರಿ ಹಣ್ಣುಗಳನ್ನು ಮಾರಾಟ ಮಾಡಿ ಖುಷಿ ಪಟ್ಟರು.
ಈ ವಿನೂತನ ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಸದಸ್ಯರಾದ ನೀಲಕಂಠ ಬಿರಾದಾರ, ನಾಗಪ್ಪ ಕುಂಬಾರ, ಮಂಜುಳಾ ಉಪಾಧ್ಯೆ, ದೀಪಾ ಹಿರೇಮಠ, ರಮಾನಂದ ಕುಲಕರ್ಣಿ, ಗ್ರಾಪಂ ಸದಸ್ಯರಾದ ಬೀರಪ್ಪ ಸೋಲಂಕರ, ಸಿದ್ದರಾಮ ಹತ್ತರಕಿ, ಗಣಪತಿ ಪಾಂಡ್ರೆ ಸೇರಿದಂತೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.

