ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ೨೬ ನೇಯ ಮತ್ತು ೬ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕೃಷಿಯಲ್ಲಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಕ್ತವಾಗಿ ಹಾಗೂ ಸ್ಥಳೀಯವಾಗಿ ನಿರ್ದರಿಸಲು, ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರು, ಇತರೆ ಇಲಾಖೆಗಳ ಸಹಯೋಗದಲ್ಲಿ ಸೂಕ್ತವಾಗಿ ನಿರ್ಣಯ ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್. ಪಾಟೀಲ ತಿಳಿಸಿದರು.
ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ೨೬ ನೇಯ ಮತ್ತು ೬ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ರೈತರು ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಶ್ರಮಿಸಬೇಕು ಎಂದು ತಿಳಿಸಿದರು.
ಈಗೀನ ಕಾಲದಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಅದನ್ನು ತಡೆಯಲು ಯುವಕರ ನಡಿಗೆ ಕೃಷಿಯ ಕಡೆಗೆ ಎಂಬ ತತ್ವವನ್ನು ಆಳವಡಿಸಿ ಹೆಸರಾಂತ ಸ್ವಾಮಿಜಿಗಳಿಂದ ಕೃಷಿ ದೀಕ್ಷೆ ನೀಡಿ ಅವರನ್ನು ಕೃಷಿಯತ್ತ ಆಸಕ್ತಿ ವಹಿಸುವಂತೆ ಮಾಡಬೇಕಾಗಿದೆ ಎಂದರು.
ರೈತರು ಚರ್ಚೆಯಲ್ಲಿ ವಿಜಯಪುರದಲ್ಲಿ ಬೆಳೆಯುವ ವಿವಿಧ ಬೆಳೆಗಳಾದ ತೊಗರಿ, ಅಜವಾನ, ಕಬ್ಬು, ದಾಳಿಂಬೆ ಇತ್ಯಾದಿಗಳಲ್ಲಿ ಬರುವ ಸಮಸ್ಯೆಗಳಾದ ಹೊಸ ತಳಿಗಳ ಬಗ್ಗೆ ಮಾಹಿತಿ, ಬೇಸಾಯಕ್ರಮ ಮತ್ತು ಕೀಟ, ರೋಗ ಹತೋಟಿ ಕ್ರಮಗಳ ಬಗ್ಗೆ ತರಬೇತಿಗಳ ಮೂಲಕ ರೈತರಿಗೆ ಸಹಾಯ ಮಾಡಬೇಕೆಂದರು. ಎಲ್ಲ ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಸಂಶೋಧನಾ ನಿರ್ದೇಶಕ ಡಾ. ಬಿ. ಡಿ. ಬಿರಾದಾರ ಮಾತನಾಡಿ, ರೈತರು ಬದುಗಳಲ್ಲಿ ಬಹುವಾರ್ಷಿಕ ಮೇವಿನ ಗಿಡಗಳನ್ನು ಬೆಳೆಯಬೇಕು. ರೈತರು ಹೆಚ್ಚಿನ ಪ್ರಮಾಣದಲ್ಲಿ ಕೀಟ/ರೋಗನಾಶಕಗಳ ಸಿಂಪರಣೆಯಿಂದ ನೈಸರ್ಗಿಕ ಕೀಟಗಳು ಹಾಳಾಗಿದ್ದು, ಇವುಗಳ ತಡೆಗೆ ಪರತಂತ್ರ ಜೀವಿಗಳನ್ನು ಅಭಿವೃದ್ದಿ ಪಡಿಸಿ ಹಾನಿಕಾರಕ ಕೀಟಗಳನ್ನು ಹತೋಟಿಯಲ್ಲಿಡಬೇಕು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ಡಾ. ರೂಪಾ ಎಲ್. ಮಾತನಾಡಿ, ರೈತರ ಬೆಳೆಗಳು ಕೀಟ ರೋಗದಿಂದ ಹಾನಿಯಾಗದಂತೆ ವಿಜ್ಞಾನಿಗಳ ತಂಡವನ್ನು ರಚಿಸಿ ಇದಕ್ಕೆ ಸಂಬಂದಿಸಿದಂತೆ ಜಿಲ್ಲೆಯ ರೈತರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.
ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ, ಡಾ. ಆರ್. ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವೈಜ್ಞಾನಿಕ ಸಲಹಾ ಸಮಿತಿಗಳು ಜಿಲ್ಲೆಗೆ ಒಂದು ದಿಕ್ಸೂಚಿಯಾಗಿದ್ದು, ಇಲ್ಲಿ ಹೊರಹೊಮ್ಮಿದ ಸಲಹೆಗಳಿಂದ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಕ್ಷೇತ್ರ ಪರಿಶೀಲನೆ ಮತ್ತು ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಅನುಕೂಲವಾಗುವುದು ಎಂದು ತಿಳಿಸಿದರು.
ವಿಜಯಪುರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಎಸ್. ಎಮ್. ವಸ್ತçದ ಹಾಗೂ ಇಂಡಿಯ ಹಿರಿಯ ವಿಜ್ಞಾನಿ ಡಾ. ಶಿವಶಂಕರಮೂರ್ತಿ ಇವರುಗಳು ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಪ್ರಗತಿಯ ಸಂಕ್ಷಿಪ್ತ ವರದಿವಾಚನ ಮಂಡಿಸಿದರು. ಸಭೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಪ್ರಗತಿಪರ ರೈತರು ಜಾನುವಾರುಗಳು ಬರಡಾಗದಂತೆ ಕ್ರಮವಹಿಸುವುದು, ಹೈನುಗಾರಿಕೆ ಮತ್ತು ಮೇವಿನ ಬೆಳೆಗಳ ಕುರಿತು ಸೂಕ್ತ ಮಾರ್ಗದರ್ಶನ, ಅಣುಬೆ ಮೌಲ್ಯವರ್ಧನೆ, ಮಹಿಳೆಯರ ಸಬಲೀಕರಣಕ್ಕಾಗಿ ಉಪ್ಪಿನಕಾಯಿ, ಆಗರಬತ್ತಿ ತಯಾರಿಕೆ, ಜೇನು ಸಾಕಾಣಿಕೆ, ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ವಿವಿಧ ಕೃಷಿ/ತೋಟಗಾರಿಕೆ ಬೆಳೆಗಳ ತಾಂತ್ರಿಕತೆ, ರೈತರ ಶ್ರಮ ಕಡಿಮೆ ಮಾಡುವ ಸಣ್ಣ ಉಪಕರಣಗಳ ಅವಿಷ್ಕಾರ ಇತ್ಯಾದಿ ಕುರಿತಂತೆ ವಿವರಗಳನ್ನು ನೀಡಿದರು.
ಸಭೆಯಲ್ಲಿ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ. ಎಸ್. ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಬಿ. ಜಗ್ಗಿನವರ, ಕೃಷಿ ವಿಜ್ಞಾನ ಕೇಂದ್ರ ವಿಜಯಪುರ ಹಾಗೂ ಇಂಡಿಯ ಎಲ್ಲ ವಿಜ್ಞಾನಿಗಳು, ಪ್ರಗತಿಪರ ರೈತರಾದ ಸಿದ್ದಪ್ಪ ಬಾಲಗೊಂಡ, ಚಂದ್ರಶೇಖರ ರೆಡ್ಡಿ, ನಿಂಗನಗೌಡ ಪಾಟೀಲ, ಸಿದ್ದು ಕವಡೆಕರ, ಭೀಮನಗೌಡ ಪಾಟೀಲ, ಅಂಕಿತ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರು, ಸರಕಾರೇತರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
