ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತ ಒಂದು ವರ್ಷ ದುಡಿದರೆ ಭಿವಿಷ್ಯದ ವರ್ಷಕ್ಕೆ ಸಾಕಾಗುವಷ್ಟು ಆಹಾರ ಸಂಗ್ರಹಿಸುತ್ತಾನೆ. ಆದರೆ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿದರೆ ಇಡೀ ಜೀವನಪರ್ಯಂತ ಸಾಕಾಗುವಷ್ಟು ಜ್ಞಾನವೆಂಬ ಆಹಾರ ಸಂಗ್ರಹಿಸಬಹುದು. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯ ತಮ್ಮ ಕೈಯಲ್ಲಿದೆ. ತಮ್ಮ ಹಣೆಯ ಬರಹವನ್ನು ತಾವೇ ಬರೆದುಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ ಹೇಳಿದರು.
ತಾಲ್ಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರದಂದು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ತಾರುಣ್ಯದಲ್ಲಿ ಕಷ್ಟಪಟ್ಟು ದುಡಿದರೆ ವೃದ್ಧಾಪ್ಯದಲ್ಲಿ ಅದೇ ಫಲವಾಗಿ ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿಗಳು ಪಾಲಕರ ಕನಸನ್ನು ಈಡೇರಿಸಿದಂತಾಗುತ್ತದೆ. ಅವರ ಉದರದಲ್ಲಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಎಂ.ಎಂ. ಮುಜಗೊಂಡ ಮಾತನಾಡಿ, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಉತ್ತಮ ಪಾಠ ಬೋಧನೆಯ ಮೂಲಕ ಶೈಕ್ಷಣ ಕ ವಾತಾವರಣ ನಿರ್ಮಾಣ ಮಾಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರ್ತಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ವಾಲಿ, ಗ್ರಾಮದ ಗಣ್ಯರಾದ ಸಂಕಪಗೌಡ ಬಿರಾದಾರ, ಯುವ ಧುರೀಣ ಅರವಿಂದ ಕರಾಳೆ, ಈರಣ್ಣ ಕಾರಕಲ್, ರಾಜೇಸಾಬ ನದಾಫ, ಸರ್ಕಾರಿ ಪಿ.ಯು. ಕಾಲೇಜು ಪ್ರಾಚಾರ್ಯೆ ಮೀನಾಕ್ಷಿ ವಾಗ್ದಾಳೆ ಹಾಗೂ ಕಾಲೇಜು ಉಪನ್ಯಾಸಕರು ಪಾಲ್ಗೊಂಡಿದ್ದರು.

