ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಹೆದ್ದಾರಿ-೨೧೮ ರ ಹೊನಗನಹಳ್ಳಿ ಇರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಜ.೨೯ಕ್ಕೆ ಪರಿಶೀಲಿಸಿ, ಸದರ ಕಾರ್ಯದಲ್ಲಿ ಒಳ್ಳೇ ಗುಣಮಟ್ಟ ಕಾಯ್ದುಕೊಂಡು ತೀವ್ರವಾಗಿ ಪೂರ್ಣಗೊಳಿಸಲು ಸೂಚಿಸಿರುತ್ತಾರೆ.
ಕಾಮಗಾರಿ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ವ್ಹಿ.ಆಯ್. ಪಾಟೀಲ್, ಕಾರ್ಯನಿರ್ವಾಹಕ ಇಂಜಿನೀಯರರು ಹಾಗೂ ವಿವೇಕ ಆರ್. ಮಠ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರೊಂದಿಗೆ ಸಂವಾದ ನಡೆಸಿ ೨೦೨೫ರ ಫೆಬ್ರುವರಿ ಚತುಷ್ಪಥ ಸೇತುವೆಯ ದ್ವೀಪಥರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹಾಗೂ ೨೦೨೫ರ ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಪಡೆದರು.
ರಾಷ್ಟ್ರೀಯ ಹೆದ್ದಾರಿ -೨೧೮ರ ಮುಳವಾಡ ಹತ್ತಿರ ಇರುವ ಟೋಲ್ ಪ್ಲಾಜಾದಲ್ಲೂ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಂಬುಲನ್ಸ್ ಮತ್ತು ಕ್ರೇನ್‌ನ್ನು ರಸ್ತೆಯ ಬಳಕೆದಾರರ ಸುರಕ್ಷತಾ ಹಿತದೃಷ್ಠಿಯಿಂದ ಹಾಗೂ ಸಾರ್ವಜನಿಕರು ಅಪಘಾತ ಸಂದರ್ಭದಲ್ಲಿ ಕೋರಿದಲ್ಲಿ ಕೂಡಲೇ ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಅಲ್ಲದೇ ರೈತರಿಗೆ ಹಾಗೂ ಸಾರ್ವಜನಿಕರೊಂದಿಗೆ ಸಯಂದಿಂದ ವರ್ತಿಸಿ ತಿಳುವಳಿಕೆ ನೀಡಿ ಕಾನೂನಾತ್ಮಕವಾಗಿ ಟೊಲ್ ಫೀ ವಸೂಲಾತಿಗೆ ತಿಳಿಸಿದರು.
ಕೊಲ್ಹಾರ ಗ್ರಾಮದಲ್ಲಿ ಸಾರ್ವಜನಿಕರ ಬೇಡಿಕೆ ಇರುವ ಕೊಲ್ಹಾರ ಗ್ರಾಮದಿಂದ ಪುನರ್ವಸತಿ ವರೆಗೆ ಸೇವಾ ರಸ್ತೆಯನ್ನು ಪರಿಶೀಲಿಸುವ ಅವಶ್ಯಕತೆ ಇರುವುದರಿಂದ ಸ್ಥಳದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈಗಾಗಲೇ ೨.೩ ಕಿ.ಮೀ ಉದ್ದದ ಸೇವಾ ರಸ್ತೆ ನಿರ್ಮಿಸಲು ಪ್ರಸ್ತಾವನೆಯನ್ನು ರಸ್ತೆ ಸುರಕ್ಷತಾ ಯೋಜನೆ ಅಡಿ ಕೈಗೊಳ್ಳಲು ಸಲ್ಲಿಸಲಾಗಿದೆ. ಅನುಮೋದನೆಗೊಂಡ ನಂತರ ಅಗತ್ಯ ಕ್ರಮ ಕೈಕೊಳ್ಳಲಾಗುವುದು ಅದಲ್ಲದೇ ತಾತ್ಕಾಲಿಕವಾಗಿ ರಸ್ತೆಯ ಸುರಕ್ಷತೆ ಸಲುವಾಗಿ ಅವಶ್ಯವಿರುವ ಕ್ರಮ ಕೈಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

