ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂಸಾರದ ವಿಷಯದಲ್ಲಿ ಬುದ್ಧಿವಾದ ಹೇಳಲು ಬಂದ ಅತ್ತೆಯನ್ನು ಬರ್ಬರವಾಗಿ ಕೊಂದು ನಂತರ ಅವಳ ಶವವನ್ನು ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದ ಅಮಾನವೀಯ ಘಟನೆ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಜರುಗಿದೆ.
ಚಿಕ್ಕರೂಗಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ಜರುಗಿದ್ದು ಅಪಾದಿತ ವ್ಯಕ್ತಿ ಭೀಮಪ್ಪ ಗುಗ್ಗರಿ ಎಂಬುವವನೇ ತನ್ನ ಅತ್ತೆ ಗೌರಾಬಾಯಿ ಈರಣ್ಣ ನರಳಿ ಎನ್ನುವವಳನ್ನು ಮಂಗಳವಾರ ಬೆಳಿಗ್ಗೆ ತೋಟದ ಮನೆಯಲ್ಲಿ ಸಲಿಕೆಯಿಂದ ಬರ್ಬರವಾಗಿ ಹತ್ಯೆಗೈದು ನಂತರ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಅವಳ ಶವವನ್ನು ಚೀಲದಲ್ಲಿ ತುಂಬಿ ಕಾಲುವೆಯಲ್ಲಿ ಎಸೆದಿದ್ದಾನೆ. ನಂತರ ಯಾರಿಗೂ ಹೇಳದಂತೆ ಹೆಂಡತಿಗೂ ಪ್ರಾಣ ಬೆದರಿಕೆ ಒಡ್ಡಿದ್ದಾನೆ.
ಬುಧವಾರ ಈ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಎಸ್.ಪಿ ಲಕ್ಷ್ಮಣ ನಿಂಬರಗಿ, ಎ.ಎಸ್.ಪಿ ಶಂಕರ ಮಾರಿಹಾಳ, ವಿಜಯಪುರ ಗ್ರಾಮಾಂತರ ಉಪವಿಭಾದ ಡಿಎಸ್‌ಪಿ ಜಿ.ಎಚ್.ತಳಕಟ್ಟಿ ಹಾಗೂ ದೇವರಹಿಪ್ಪರಗಿ ಪಿಎಸ್‌ಐ ಬಿ.ಎ.ತಿಪರಡ್ಡಿ ಭೇಟಿ ನೀಡಿದ್ದಾರೆ.
