ಅಂಗನವಾಡಿಗಳಿಗೆ ಕಳಪೆ ದವಸ-ಧಾನ್ಯ ವಿತರಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಬಬಲೇಶ್ವರ ಖಡಕ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳೇ ನಿಜವಾದ ದೇವರು. ಅವರೊಂದಿಗೆ ಕಳೆಯುವ ಸಮಯವೇ ಸುಸಮಯ, ಮಕ್ಕಳನ್ನು ಭೇಟಿ ಮಾಡುವುದು ಅವರೊಂದಿಗೆ ಸಂವಾದ ನಡೆಸುವುದು ನನಗೆ ಅತ್ಯಂತ ಇಷ್ಟವಾದ ಕೆಲಸ. ಹಾಗಾಗಿ ನನ್ನ ನೂತನ ವರ್ಷಾರಂಭವನ್ನು ಅಂಗನವಾಡಿಯ ಮುದ್ದು ಮಕ್ಕಳಿಗೆ ಸಿಹಿ ವಿತರಿಸುವುದರೊಂದಿಗೆ ಹಾಗೂ ಅವರೊಂದಿಗೆ ಸಂವಾದ ನಡೆಸುವುದರ ಮೂಲಕ ಪ್ರಾರಂಭಿಸಿರುವುದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಬುಧವಾರ ವಿಜಯಪುರ ತಾಲೂಕಿನ ಉಕುಮನಾಳ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ ಬಬಲೇಶ್ವರ ಅವರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಹೆಸರು ಬೆಳೆ, ಕಡಲೆ ಬೆಳೆ, ವಿವಿಧ ದವಸ ಧಾನ್ಯಗಳನ್ನು ಪರಿಶೀಲಿಸಿ ಅತ್ಯಂತ ಕಳಪೆ ಮಟ್ಟದ ದವಸ ಧಾನ್ಯಗಳು ಇರುವುದನ್ನು ದೃಢಪಡಿಸಿಕೊಂಡ ಅವರು, ಅಧಿಕಾರಿಗಳ ಸಮ್ಮುಖದಲ್ಲಿ ಅತ್ಯಂತ ಬೇಸರ ವ್ಯಕ್ತಪಡಿಸಿದರು.
ವಿಜಯಪುರ ತಾಲೂಕಿನಲ್ಲಿ ಅಂಗನವಾಡಿಗಳಿಗೆ ದವಸ ಧಾನ್ಯಗಳನ್ನು ವಿತರಿಸುತ್ತಿರುವ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತಮ್ಮ ಕಾರ್ಯಾಲಯಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಶಿಶು ಅಭಿವೃದ್ಧಿ ಅಧಿಕಾರಿ ಬಸವರಾಜ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

