ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕೇಂದ್ರ ಸರ್ಕಾರ ಬರ್ಮಾದಿಂದ ಸಾವಿರಾರು ಟನ್ ತೊಗರಿ ಆಮದು ಮಾಡಿಕೊಳ್ಳುವ ಮೂಲಕ ತೊಗರಿ ಬೆಳೆಗೆ ರೂ. ೧೨ ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ಕಡಿಮೆ ಮಾಡುವ ಮೂಲಕ ರೈತ ಬಾಂಧವರ ಗಾಯದ ಮೇಲೆ ಬರೆ ಎಳೆದಿದೆ. ರೈತ ಬಾಂಧವರ ಬೆಳೆದ ತೊಗರಿಗೆ ಯೋಗ್ಯ ಬೆಲೆ ನೀಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಸರಿಯಾದ ಬೆಲೆ ಸಿಗದೇ ಹೋದರೆ ರೈತರು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಗರಿ ಕಟಾವು ಮಾಡಿ ರಾಶಿ ಮಾಡುವ ಮೊದಲು ಪ್ರತಿ ಕ್ವಿಂಟಲ್‌ಗೆ ತೊಗರಿಗೆ ರೂ. ೧೨ ಸಾವಿರ ಮಾರುಕಟ್ಟೆ ದರವಿತ್ತು. ರೈತರು ತೊಗರಿ ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ದೀಢಿರನೆ ಬೆಲೆ ಇಳಿಸಿ ಪ್ರತಿ ಕ್ವಿಂಟಾಲ್‌ಗೆ ರೂ. ೭,೫೫೦ ನಿಗದಿ ಮಾಡಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ತೊಗರಿ ಹಂಗಾಮು ಇಲ್ಲದೇ ಇದ್ದಾಗ ದರ ಹೆಚ್ಚಿಸಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಎಲ್ಲ ರಾಜಕೀಯ ಪಕ್ಷದವರು ನಾವು ರೈತರ ಮಕ್ಕಳು ಎಂದು ತಮ್ಮ ಭಾಷಣದಲ್ಲಿ ಹೇಳತ್ತಾರೆ ವಿನಃ ಅಧಿಕಾರಕ್ಕೆ ಬಂದರೆ ಇದನ್ನು ಮರೆಯುತ್ತಾರೆ. ರೈತರ ಬಗ್ಗೆ ನೈಜ ಕಳಕಳಿ ಯಾವ ರಾಜಕೀಯ ಪಕ್ಷದವರಿಗೆ ಇಲ್ಲ. ರೈತ ವಿರೋಧ ಪಕ್ಷಗಳಿಗೆ ಪಾಠ ಕಲಿಸಬೇಕಿದೆ. ರೈತರ ಸಂಕಷ್ಟ ಅರಿತು ಸರ್ಕಾರ ಎಚ್ಚೆತ್ತುಕೊಂಡು ಮೊದಲಿನಂತೆ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ ರೂ. ೧೨ ಸಾವಿರ ದರ ನಿಗದಿ ಪಡಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಎಲ್ಲ ಜಿಲ್ಲೆಯ ರೈತರು ತೊಗರಿ ಬೆಳೆದಿದ್ದಾರೆ. ಒಂದೇ ಬೆಳೆ ಬೆಳೆದರೆ ಬೆಂಬಲ ಬೆಲೆ ಹೆಚ್ಚಿಸುವದು ಅಸಾಧ್ಯವೆಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಪತ್ರಿಕೆ ಹೇಳಿಕೆ ನೀಡುವ ಮೂಲಕ ಅವರು ರೈತ ವಿರೋಧಿ ಎಂಬುವದನ್ನು ಸಾಬೀತು ಪಡಿಸಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯದ ಸಚಿವರಾದ ಶಿವಾನಂದ ಪಾಟೀಲರು ತೊಗರಿ ಬೆಲೆ ಹೆಚ್ಚಿಸುವದು ಅಸಾಧ್ಯ ಎಂಬ ಹೇಳಿಕೆ ನೀಡುವುದು ಸರಿಯಲ್ಲ. ಇವರು ಮುಖ್ಯಮಂತ್ರಿಯನ್ನು ಒಳಗೊಂಡಂತೆ ಎಲ್ಲ ಸಚಿವರ ನಿಯೋಗವನ್ನು ಪ್ರಧಾನಿ, ಕೇಂದ್ರ ಕೃಷಿ ಸಚಿವರ ಬಳಿ ತೆಗೆದುಕೊಂಡು ಹೋಗಿ ಕೇಂದ್ರ ಸರ್ಕಾರ ಮೇಲೆ ತೊಗರಿ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಡ ತಂದರೆ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಣಮಂತ್ರಾಯ ಗುಣಕಿ, ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ಶಿವಣ್ಣ ಲಗಳಿ, ಬಸನಗೌಡ ಪಾಟೀಲ, ಮಲ್ಲನಗೌಡ ನಾಡಗೌಡ, ಮಲ್ಲು ಕೋಲಕಾರ, ಬಸಣ್ಣ ಹಾದಿಮನಿ, ಮುದಕಣ್ಣ ಕೆಳಗೇರಿ, ಶ್ರೀಶೈಲ ಮಾಳೂರ, ಶ್ರೀಶೈಲ ಶಿವಯೋಗಿ, ಮಹಾದೇವಪ್ಪ ಭಜಂತ್ರಿ, ಭೀಮರಾಯ ಚಿಮ್ಮಲಗಿ ಇದ್ದರು.

