ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪುರಸಭೆ ಸ್ಥಾಯಿ ಸಮೀತಿಯ ಸದಸ್ಯರ ಪಟ್ಟಿ ಅನುಮೋದನೆ ನೀಡುವದು, ಪಟ್ಟಣದ ಸರ್ವೇ ನಂ ೫೯ರ ಜಾಗೆಯಲ್ಲಿನ ಅತಿಕ್ರಮಣ ತೆರವು, ಗಣೇಶ ನಗರದಲ್ಲಿನ ಸರ್ವೇ ನಂ ೭೮ರ ಆಸ್ತಿಯಲ್ಲಿನ ಅತಿಕ್ರಮಣ ಉದ್ಯಾನವನಗಳ ಕುರಿತು ಚರ್ಚೆ, ವಿವಿಧ ಕಾಮಗಾರಿಗಳ ಅನುಮೋದನೆ ನೀಡುವದು, ಪುರಸಭೆ ಕಚೇರಿಯ ಎಲ್ಲ ವಿಭಾಗಕ್ಕೆ ಹೊಸದಾಗಿ ಕಂಪ್ಯೂಟರ್ ಹಾಗೂ ಇತರೆ ಸಾಮಗ್ರಿಗಳ ಖರೀದಿ ಚರ್ಚೆ, ಬೀದಿ ದೀಪಗಳ ದುರಸ್ತಿ ಮತ್ತು ಹಸ್ತಾಂತರ, ಅಂಬೇಡ್ಕರ್ ಭವನ ಲೀಜ್ ಕೊಡುವ ಬಗ್ಗೆ, ತಾಳಿಕೋಟೆ ರಸ್ತೆಯಲ್ಲಿರುವ ಆಶ್ರಯ ಕಾಲೋನಿಯ ಮನೆಗಳಿಗೆ ಸಂಬಂಧಿಸಿದಂತೆ ಠರಾವು ಪುಸ್ತಕದಲ್ಲಿ ಇಲ್ಲದ ಆಸ್ತಿಗಳಿಗೆ ನಮೂನೆ-೩ ಪೂರೈಸುವದು, ವಕೀಲರ ಭವನ ನಿರ್ಮಿಸುವದು ಸೇರಿದಂತೆ ಅಧ್ಯಕ್ಷರ ಅಪ್ಪಣೆಯಂತೆ ಹಲವು ವಿಷಯಗಳು ಮತ್ತು ಹಿಂದಿನ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಪೈಕಿ ಕಾರ್ಯರೂಪಕ್ಕೆ ಬರದ ವಿಷಯಗಳ ಬಗ್ಗೆ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ಕಳೆದ ಸಭೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಿಂದ ಬೀದಿ ವ್ಯಾಪಾರಸ್ಥರು ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಗಳನ್ನು ಬಳಸಕೂಡದು. ದೀಪಾವಳಿ ಹಬ್ಬದ ವರೆಗೆ ಪುರಸಭೆ ನಿಗಧಿಪಡಿಸಿದ ಜಾಗೆಯಲ್ಲಿ ನೆಲದಲ್ಲಿ ಕುಳಿತು ವ್ಯಾಪರ ನಡೆಸಬೇಕು ತಳ್ಳುಗಾಡಿ ಬಳಸಿದಲ್ಲಿ ದಂಡ ವಿಧಿಸುವದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ದೀಪಾವಳಿ ಮುಗಿದು ಹಲವು ದಿನಗಳು ಕಳೆದರೂ ತಳ್ಳುಗಾಡಿಗಳು ರಸ್ತೆಯನ್ನು ಬಿಟ್ಟಿಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು. ಈ ಬಗ್ಗೆ ಅಧ್ಯಕ್ಷ ಗೊಳಸಂಗಿ ಮಾತನಾಡಿ ಪುರಸಭೆ ಮುಖ್ಯಾಧಿಖಾರಿಗೆ ೮ ದಿನಗಳ ಗಡುವು ನೀಡಿ ಎಲ್ಲ ತರಕಾರಿ ವ್ಯಾಪಾರಸ್ಥರನ್ನು ಹಳೆಯ ಪೊಲೀಸ್ ಕ್ವಾಟ್ರಸ್ ಗೆ ಶಿಫ್ಟ ಮಾಡಬೇಕು. ಯಾರೊಬ್ಬರೂ ರಸ್ತೆಯಲ್ಲಿ ಕುಳಿತು ವ್ಯಾಪಾರ ನಡೆಸದಂತೆ ನೋಡಿಕೊಳ್ಳಬೇಕು. ಹಳ್ಳಿಗಳಿಂದ ಬರುವ ರೈತರು ತರಕಾರಿ ವ್ಯಾಪಾರಕ್ಕೆ ಬೆಳಿಗ್ಗೆ ಎಂಜಿವಿಸಿ ಕಾಲೇಜು ಎದುರು ಜಾಗೆ ನಿಗದಿಪಡಿಸಲಾಗಿದೆ. ಅಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎಂದು ಹೇಳುತ್ತಿದ್ದಂತೆಯೇ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಇಂದಿರಾ ನಗರದಲ್ಲಿನ ಅತಿಕ್ರಮಿತ ಎಂದು ಹೇಳಲಾದ ಶೆಡ್‌ಗಳನ್ನು ತೆರವುಗೊಳಿಸಿದ್ದು ಮತ್ತೆ ಅದೇ ಸ್ಥಳದಲ್ಲಿ ಹಲವರು ಶೆಡ್ ನಿರ್ಮಿಸಿಕೊಳ್ಳುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಹಣಮಂತ ಭೋವಿ ಅಧಿಕಾರಿಗಳನ್ನು ಒತ್ತಾಯಿಸಿದರು. ತೆರವುಗೊಳಿಸುತ್ತಿದ್ದಂತೆಯೇ ಈ ಜಾಗೆಗೆ ತಂತಿ ಬೇಲಿ ಹಾಕಲಿಲ್ಲವೇಕೆ ಎಂದು ಸದಸ್ಯೆ ಸಂಗಮ್ಮ ದೇವರಳ್ಳಿ ಅಧಿಕಾರಿಗಳ ವಿರುದ್ಧ ಗರಂ ಆದರು. ಈ ವೇಳೆ ಅಧ್ಯಕ್ಷ ಗೊಳಸಂಗಿ ಅವರು ಅತಿಕ್ರಮಿತ ಶಡ್‌ಗಳನ್ನು ತೆರವುಗೊಳಿಸುವಾಗ ಸದಸ್ಯರೊಬ್ಬರು ಅಡ್ಡಲಾಗಿದ್ದರು ಎನ್ನುತ್ತ ಫಲಾನುಭವಿಗಳ ಬಳಿ ಇರುವ ಹಕ್ಕು ಪತ್ರದಲ್ಲಿ ಪುರಸಭೆ ಸದಸ್ಯರೊಬ್ಬರ ಸಹಿ ಇದೆ ಎಂದು ಗಂಭೀರ ವಿಚಾರವನ್ನು ಹೊರಹಾಕಿ ಸಧ್ಯ ಅತಿಕ್ರಮಿಸಿದವರ ಬಳಿ ಇರುವ ದಾಖಲೆಗಳನ್ನು ೫ದಿನಗಳ ಒಳಗಾಗಿ ಕಚೇರಿಗೆ ಸಲ್ಲಿಸುವಂತೆ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಪುರಸಭೆಗೆ ಕಬ್ಜಾ ಮಾಡಿಕೊಳ್ಳುವಂತೆ ಮುಖ್ಯಾಧಿಕಾರಿಗೆ ತಿಳಿಸಿದರು.
ಪಟ್ಟಣದ ಮುಖ್ಯ ಬಜಾರನಲ್ಲಿರುವ ಪುರಸಭೆಯ ಕಟ್ಟಡವನ್ನು ತೆರವುಗೊಳಿಸಿದ್ದು ಅಲ್ಲಿನ ಕಬ್ಬಿಣ, ಬಾಗಿಲುಗಳನ್ನು ಯಾರೋ ಮಾರಿಕೊಂಡು ತಿಂದಿದ್ದಾರೆ ಅವರ ಮೇಲೆ ದಯವಿಟ್ಟು ಪ್ರಕರಣ ದಾಖಲಿಸಿ ಎಂದು ವಿರೇಶ ಹಡಲಗೇರಿ ಸಭೆಯಲ್ಲಿ ಮುಖ್ಯಾಧಿಕಾರಿಗಳಿಗೆ ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಯಲ್ಲಪ್ಪ ನಾಯಕಮಕ್ಕಳ, ಬಸು ಮುರಾಳ, ಭಾರತಿ ಪಾಟೀಲ, ಸೋನಾಬಾಯಿ ನಾಯಕ, ಸಹನಾ ಬಡಿಗೇರ, ಅಶೋಕ ವನಹಳ್ಳಿ, ಸದಾಶಿವ ಮಾಗಿ, ರಫೀಕ ದ್ರಾಕ್ಷಿ ಸೇರಿದಂತೆ ನಾಮ ನಿರ್ದೇಶಿತ ಸದಸ್ಯರಾದ ಗೋಪಿ ಮಡಿವಾಳರ, ಸಂತು ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು.
ಅಂಬೇಡ್ಕರ್ ಭವನ ಲೀಸ್ ಗೆ ಕೊಡದಿರಲು ಮನವಿ
ಇಲ್ಲಿನ ಅಂಬೇಡ್ಕರ್ ಭವನವನ್ನು ಲೀಜ್ ಗೆ ಕೊಡುವ ವಿಚಾರವಾಗಿ ಚರ್ಚಿಸಲು ನಿರ್ಧರಿಸಲಾಗಿತ್ತು. ಈ ಬಗ್ಗೆ ಚರ್ಚೆ ಪ್ರಾರಂಭವಾದಾಗ ಕೆಲ ಸದಸ್ಯರು ಲೀಸ್ ಗೆ ಕೊಡಲು ಒಪ್ಪಿಗೆಯನ್ನೂ ಸೂಚಿಸಿದ್ದರು. ಈ ವೇಳೆ ಸಭೆಗೆ ಆಗಮಸಿದ ಡಿಎಸ್‌ಎಸ್ ಮುಖಂಡರಾದ ಹರೀಶ ನಾಟೆಕಾರ, ದೇವರಾಜ ಹಂಗರಗಿ, ಪ್ರಕಾಶ ಸರೂರ ಇನ್ನೀತರರು ಭವನವನ್ನು ಲೀಜ್ ಗೆ ನೀಡದಂತೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
“ಎಸ್‌ಎಫ್‌ಸಿ ಅನುದಾನದ ಅಡಿ ಮತಕ್ಷೇತ್ರಕ್ಕೆ ೨೦ ಕೋಟಿ ರೂ ಮಂಜೂರಾದ ಬಗ್ಗೆ ಶಾಸಕರು ತಿಳಿಸಿದ್ದಾರೆ. ಅದರಲ್ಲಿ ನಮ್ಮ ಪುರಸಭೆಗೆ ೯ಕೋಟಿ ನೀಡುತ್ತಿದ್ದು ಈ ಪೈಕಿ ಮುಖ್ಯ ಬಜಾರ್ ನಲ್ಲಿ ಮೆಗಾ ಮಾರ್ಕೇಟ್ ಗೆ ೫ಕೋಟಿ, ಪುರಸಭೆಯ ಹಿಂದೆ ಮುಂದೆ ಕಟ್ಟಡ ಮತ್ತು ಹುಡ್ಕೋ ಬಡಾವಣೆಯ ಕರ್ನಾಟಕ ಬ್ಯಾಂಕ್ ಎದುರು ಸುಸಜ್ಜಿತ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು.”
– ಮಲ್ಲನಗೌಡ ಬಿರಾದಾರ
ಮುಖ್ಯಾಧಿಖಾರಿ

