ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅವರು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸಲಾಗುತ್ತದೆ. ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ-ಸಾಂಬಾರು ಅನ್ನು ಉಂಡೆ ಉಂಡೆ ಮಾಡಿ ಹೊಲದ ತುಂಬಾ ಚೆರಗ ಚೆಲ್ಲಲಾಗುತ್ತದೆ. ಈ ಎಳ್ಳಮವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿಯೂ ಚರಗ ಚೆಲ್ಲುವ ಕಾರ್ಯಕ್ರಮ ನಡೆಯಿತು
ಎಳ್ಳ ಅಮವಾಸ್ಯೆ ಬಂತು ಎಂದರೆ ಸಾಕು ರೈತರಿಗೆ ಎಲ್ಲಿಲ್ಲದ ಖುಷಿ. ವರ್ಷ ಪೂರ್ತಿ ಭೂಮಿ ತಾಯಿಯ ಮಡಿಲಲ್ಲಿ ಬೆವರು ಸುರಿಸಿ ದುಡಿದು, ವರ್ಷಕ್ಕೊಮ್ಮೆ ಅದೇ ಭೂತಾಯಿ ಒಡಲಿನಲ್ಲಿ ಸಹ ಕುಟುಂಬ ಪರಿವಾರ ಸಮೇತ ವೈವಿಧ್ಯಮಯ ಆಹಾರ ತಯಾರಿಸಿ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರೇ ಸ್ವರ್ಗವೇ ಧರೆಗಿಳಿದು ಬಂದ ಅನುಭವ ಆಗುತ್ತದೆ.
ಮಹಿಳೆಯರು ತರ ತರಹದ ಹೋಳಿಗೆ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಎಣ್ಣೆ ಹೋಳಿಗೆ , ಕರಿಗಡಬು, ಕರ್ಚಿಕಾಯಿ ಬಜ್ಜಿ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಅಗಸಿಪುಡಿ, ಶೆಂಗಾಪುಡಿ, ಪುಟಾಣಿ, ಗುರೆಳ್ಳುಗಳ ಚೆಟ್ನಿ ಹಾಗೂ ಕೆಂಪಿಂಡಿ ತಯಾರು ಮಾಡಿಕೊಂಡು ದೂರದ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಕರೆಯಿಸಿ ಪ್ರತಿಯೊಬ್ಬರು ಹೊಸ ಬಟ್ಟೆಯನ್ನು ಉಟ್ಟು ಪ್ರೀತಿಯಿಂದ ಭೋಜನ ಮಾಡುವುದು
ಐದು ಕಲ್ಲುಗನ್ನು ಇಟ್ಟು ಅವುಗಳನ್ನು ಪಂಚ ಪಾಂಡವರೆಂದು ಹಾಗೂ ಅದರ ಹಿಂದೆ ಒಂದು ಕಲ್ಲನ್ನು ಇಟ್ಟು ಅದನ್ನು ಮಹಾಕಳ್ಳಾ ಎಂದು ಹೇಳುತ್ತಾ, ಭಕ್ತಿ ಭಾವದಿಂದ ವಿಭೂತಿ, ಕುಂಕುಮ, ಭಂಡಾರ ಹಚ್ಚಿ ಮತ್ತು ಸುಣ್ಣದಿಂದ ಮರಕ್ಕೆ ಐದು ಸುತ್ತು ಗೆರೆ ಬಳಿದು ಪೂಜಿಸಿ ಎಲ್ಲಾ ತರಹದ ಹೋಳಿಗೆ ರೊಟ್ಟಿ, ಬದನೇಕಾಯಿಪಲ್ಲೆ, ಅನ್ನ ನೈವೇದ್ಯ ಹಿಡಿದು ಬೆಳೆದ ಬೆಳೆಗಳಿಗೆಲ್ಲಾ ಹೊಲದ ತುಂಬಾ “ಹುಲ್ಲಿಲಿಗೋ ಚೇಲಾಮ್ಬ್ರಗೋ” ಎಂದು ಘೋಷಣೆ ಕೂಗುತ್ತಾ ಚೇರಾಗ ಚೆಲ್ಲುವರು.
ಹೊನವಾಡ ಗ್ರಾಮದ ಜವಳಿ ವ್ಯಾಪಾರಸ್ಥ ಗೌರಿಶಂಕರ ಹಿರೇಮಠ ಅವರ ಹೊಲದಲ್ಲಿ ಚರಗ ಚೆಲ್ಲುವ ಮೂಲಕ ಆಚರಿಸಲಾಯಿತು.
ಈ ಸಂರ್ದಭದಲ್ಲಿ ಶ್ರೀಶೈಲ ಕೋರಬು ನಿಂಗಪ್ಪ ಕೋಟಿ ಹಣಮಂತ ಶಿಂದೆ ಸುರೇಶ ಕೊಣ್ಣೂರ ಅನಿಲ್ ಕನೇರಿ ಹಾಗೂ ಹಿರೇಮಠ್ ಕುಟುಂಬಸ್ಥರು ಇದ್ದರು.

