ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಉತ್ತರ ಕರ್ನಾಟಕದ ವಿಶೇಷ ಹಬ್ಬಗಳಲ್ಲಿ ಒಂದಾದ ಎಳ್ಳ ಅಮವಾಸ್ಯೆಯಂದು ಗ್ರಾಮೀಣ ಸೊಗಡಿನ ಚರಗ ಚಲ್ಲುವ ಹಬ್ಬವು ಸೋಮವಾರ ರೈತರು ಸಂಭ್ರಮದಿಂದ ಆಚರಿಸಿದರು.
ತಾಲ್ಲೂಕಿನಲ್ಲಿ ಬರುವ ಎಲ್ಲ ಗ್ರಾಮಗಳ ರೈತರು ಎತ್ತಿನ ಬಂಡಿ ಹಾಗೂ ಟ್ರಾಕ್ಟರಗಳನ್ನ ಅಲಂಕಾರ ಮಾಡಿಕೊಂಡು ತಮ್ಮ ಕುಟುಂಬ ಸಮೇತರಾಗಿ ಬಂಧು ಬಾಂದವರೊಡನೆ ಹೊಲಗಳಿಗೆ ತೆರಳಿ ಭೂದೇವಿಯ ಪೂಜೆ ಸಲ್ಲಿಸಿದರು.
ಹಸಿರು ಪ್ರಕೃತಿಯ ಮಡಿಲಲ್ಲಿ ರೈತರು ತಾವು ಬೇಳೆದ ಬೆಳೆಗಳ ಮಡಿಲಲ್ಲಿ ಈ ಹಬ್ಬವನ್ನು ಆಚರಣೆ ಮಾಡಿದರು. ರೈತರು ತಾವು ಶ್ರಮವಹಿಸಿದ ತೋಟವು ಉತ್ತಮ ಫಸಲು ನೀಡಲಿ ಎಂಬ ಉದ್ದೇಶದಿಂದ ಎಳ್ಳ ಅಮವಾಸ್ಯೆ ದಿನ ಚರಗ ಚಲ್ಲಿ ಭೂ ತಾಯಿಯ ಉಡಿ ತುಂಬಿ ಪೂಜೆ ಸಲ್ಲಿಸಿದರು. ತೋಟದಲ್ಲಿದ್ದ ಬನ್ನಿ ಮರಕ್ಕೆ ಸೀರೆಯುಡಿಸಿ ಉಡಿ ತುಂಬಿದರು. ಚಾಂಗಿ ಬೊಲೊ ಚಾಂಗಿಬೊಲೊ ಎಂದು ಚರಗ ಚೆಲ್ಲಿದರು.
ಜಾತಿ ಮತ ಬೇಧ ಭಾವವಿಲ್ಲದೆ ಬಂಧು ಬಾಂಧವರಡೊಡನೆ ಹಿರಿಯರು, ಮಹಿಳೆಯರು, ಮಕ್ಕಳು ಎಲ್ಲರೂ ಸೇರಿ ಈಡಿ ದಿನ ಪ್ರಕೃತಿಯ ಮಡಿಲಲ್ಲಿ ಮನೆಯಿಂದ ತಂದಿದ್ದ ರುಚಿಕರವಾದ ಮೃಷ್ಠಾನ್ನ ಭೋಜನ ಸಜ್ಜಿ ರೊಟ್ಟಿ, ಮೊಸರು, ಹಿಂಡಿ, ಕರಿಗಡುಬು, ಸೆಂಗಾ ಹೋಳಿಗ, ಹಲವಾರು ಬಗೆಯ ಪಲ್ಯೆ ರುಚಿಕರವಾದ ಊಟ ಸೇವಿಸಿ ಸಂಭ್ರಮಿಸಿದರು. ಹಿರಿಯರು ಜಾನಪದ ಹಾಡುಗಳನ್ನು ಹಾಡುತ್ತಾ ಮೊಮ್ಮಕಳೊಂದಿಗೆ ನಲಿದರು. ಶಂಭುಲಿಂಗ ಗಿಡ್ನವರ, ಕಾಶಿನಾಥ ಜೇವೂರ ಕುಟುಂಬದ ಸದಸ್ಯರು ಇದ್ದರು.

