ಶ್ರೀ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದಲ್ಲಿ ಗದುಗಿನ ಜಗದ್ಗುರು ಸದಾಶಿವಾನಂದ ಶ್ರೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಂದು ಊರಿಂದ, ಒಂದು ಊರಿಗೆ ಹೊರಟರೆ ಸಾಕು, ಸಾವಿರಾರು ಜನರು ಶ್ರೀ ಸಿದ್ಧೇಶ್ವರ ಅಪ್ಪನವರ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದರು ಕಾರಣ ಅವರು ಬುದ್ಧನ ಸ್ವರೂಪಿಯಾಗಿದ್ದರು ಎಂದು ಗದುಗಿನ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ಅಂಗವಾಗಿ `ಜಾಗತಿಕ ತಾತ್ವಿಕ ಚಿಂತನೆಗಳು ‘ಹಮ್ಮಿಕೊಂಡಿದ್ದ ೬ ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸಿದ್ದೇಶ್ವರ ಅಪ್ಪಾಜಿಯವರಿಗೆ ಹಿರಿಯರೆಂದರೆ, ಜನಸಾಮನ್ಯರೆಂದರೆ, ರೈತರೆಂದರೆ ಅಪಾರ ಪ್ರೀತಿ ದೊಡ್ಡ-ದೊಡ್ಡ ವ್ಯಕ್ತಿಗಳಿಗಿಂತ ಅತ್ಯಂತ ಸರಳ ಸಾಮಾನ್ಯ ಜನರು ಬಂದರೆ ಸಾಕು ಅಪ್ಪನವರು ಮನಸ್ಸು ಅರಳುತ್ತಿತ್ತು. ಅಂತಹ ವ್ಯಕ್ತಿತ್ವ ಅಪ್ಪನವರದ್ದು ಎಂದರು.
ಗೋಷ್ಠಿಯನ್ನು ಉದ್ಘಾಟಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಮಾತನಾಡಿ, ನಾನು ಪ್ರಥಮ ಬಾರಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪಕ್ಕದಲ್ಲಿ ಕುಳಿತಾಗ ನನಗೆ ಅನುಭವವಾಗಿದ್ದು ನಾನು ಸಾಕ್ಷಾತ ರಾಮಕೃಷ್ಣ ಪರಮ ಹಂಸರ ಪಕ್ಕದಲ್ಲಿಯೇ ಕುಳಿತಿದ್ದೇನೆ ಎಂಬ ಭಾಸವಾಯಿತು. ಮತ್ತು ಅಪೂರ್ಣವಾಗಿದ್ದ ನಾನು ಪೂರ್ಣಗೊಂಡ ಅನುಭವವಾಯಿತು ಎಂದು ಹೇಳಿದರು.
ಅವರ ಮುಖದ ಶಾಂತತೆ ನನ್ನ ಎಲ್ಲ ಪ್ರಶ್ನೆಗಳಿಗೂ ಮೌನವಾಗಿಯೇ ಉತ್ತರ ನೀಡಿತು. ಅವರ ಮಾತುಗಳು ನನ್ನ ಜೀವನದಲ್ಲಿ ಕವಿದ ಕತ್ತಲನ್ನು ಸರಿಸಿ ಬೆಳಕಿನ ದೀಪವನ್ನು ಹಚ್ಚಿದವು. ಆ ಸಮಯದಲ್ಲಿ ನಾನು ಅತ್ಯಂತ ಖಿನ್ನತೆಗೆ ಒಳಗಾಗಿದ್ದೆ, ಜೀವನದಲ್ಲಿ ಅತ್ಯಂತ ದುಖದ ಸಮಯ ನನ್ನದಾಗಿತ್ತು ಆಗ ಆ ಸಮಯದಲ್ಲಿ ಶ್ರೀಗಳು ನನ್ನ ಬದುಕಿನಲ್ಲಿ ಬಂದಂತಹ ಭಗವಂತರಾದರು. ಬದುಕಿಗೆ ಹೊಸ ರೂಪವನ್ನು ನೀಡಿದಂತವರು. ಬದುಕಿನಲ್ಲಿ ಕಷ್ಟಗಳನ್ನು ಮೆಟ್ಟಿ ನಿಂತು ಹೇಗೆ ಬದುಕಬೇಕು ಹೇಗೆ ಗೆಲ್ಲಬೇಕು ಎಂದು ಕಲಿಸಿದವರು. ಆ ಮುಳುಗುತ್ತಿರುವ ನನ್ನ ಜೀವನದ ದೋಣಿಯಿಂದ ಇಂದು ನಾನು ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಮುಟ್ಟಿದ್ದೇನೆ ನಿಮ್ಮೆಲ್ಲರ ಮುಂದೆ ನಿಂತಿದ್ದೇನೆ ಎಂದರೆ ಅದಕ್ಕೆ ಶ್ರೀ ಸಿದ್ದೇಶ್ವರ ಅಪ್ಪನವರೆ ಕಾರಣ ಎಂದು ಅವರೊಬ್ಬ ಮಹಾನ್ ಮನಸಶಾಸ್ತ್ರಜ್ಞರಾಗಿದ್ದರು ಎಂದು ಶ್ರೀಗಳೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಭಾಷಣ ಮಾಡುವುದೆಂದರೆ ನನಗೆ ಪಂಚಪ್ರಾಣ ಆದರೆ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಅಪ್ಪನವರ ಬಗ್ಗೆ ಮಾತನಾಡುವುದು ಸರಳವಲ್ಲ. ಅವರ ಬಗ್ಗೆ ಮಾತನಾಡಲು ಯಾವ ಪದಗಳು ಹೊಲಿಕೆ ಆಗುವುದಿಲ್ಲ ಎಲ್ಲದಕ್ಕೂ ಮೀರಿದ ಮಹಾತ್ಮರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಎಂದರು.
ಶ್ರೀ ಅಪ್ಪಾಜೀಯವರು ಎಲ್ಲ ಕ್ಷೇತ್ರಗಳ ಬಗ್ಗೆ ಅಪಾರ ಜ್ಞಾನ ಹೊಂದಿದಂತವರು. ಯಾರಲ್ಲಿ ಯಾವ ಕೌಶಲ್ಯವಿದೆ. ಯಾರಿಂದ ಏನು ಕೆಲಸವಾಗುತ್ತದೆ ಎಂಬ ಅರಿವು ಶ್ರೀಗಳಿಗಿತ್ತು. ಆಧ್ಯಾತ್ಮದ ಜೊತೆಗೆ ಲೌಕಿಕ ಜಗತ್ತಿನಲ್ಲಿಯೂ ಅಭಿವೃದ್ಧಿಯನ್ನು ತರಲು ಪ್ರಯತ್ನಿಸಿದಂತವರು. ಅವರೊಬ್ಬ ನಿಜವಾದ ತತ್ವಜ್ಞಾನಿಯಾಗಿದ್ದರು ಎಂದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು.
ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಪ.ಪೂ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾನು ಈ ಮಾರ್ಗಕ್ಕೆ ಬಂದಿದ್ದೆ ಅಪ್ಪಾಜಿಯವರ ಪ್ರವಚನ, ಮಾತುಗಳನ್ನು ಕೇಳಿ. ಒಬ್ಬ ಯೋಗಿ ಹೇಗೆ ಇರುತ್ತಾನೆ ಎಂಬುವುದಕ್ಕೆ ಸಾಕ್ಷಿಯಾದಂತವರು. ಇಡೀ ಸಂತ ಕುಲಕ್ಕೆ ಮಾದರಿಯಾದಂತವರು ಶ್ರೀ ಸಿದ್ದೇಶ್ವರ ಅಪ್ಪನವರು ಎಂದು ಹೇಳಿದರು.
ವಿಜಯಪುರದ ಶ್ರೀ ಷಣ್ಮುಖಾರೂಡ ಅಭಿನವ ಸಿದ್ಧರೂಢ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಅಂದಕಾರವನ್ನು ಕಳೆಯುವವನೆ ಗುರು. ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವವನೆ ಗುರು ಅಂತಹ ನಮ್ಮ ಜೀವನದ ಕತ್ತಲನ್ನು ಕಳೆದು ಬೆಳಕು ತುಂಬಿದವರು ಅಜ್ಞಾನದ ಕತ್ತಲೆಯನ್ನು ಕಳೆದ ಜ್ಞಾನದ ಬೆಳಕನ್ನು ತುಂಬಿದಂತವರು. ಸನ್ಯಾಸ ಕುಲದ ರಾಷ್ಟ್ರಪತಿಗಳೆಂದರೆ ಅದು ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸುಜ್ಞಾನದ ಬೆಳಕನ್ನು ಜಗತ್ತಿಗೆ ತುಂಬುವ ಮೂಲಕ ಅರಿವಿನ ದೀಪದ ಮೂಲಕ ನಮ್ಮ ಮನಸ್ಸಿನ ಕತ್ತಲೆಯನ್ನು ಕಳೆದಂತವರು. ಅಂತಹ ಒಂದು ಭವ್ಯ ವ್ಯಕ್ತಿತ್ವ ಹೊಂದಿದಂತವರು ನಮ್ಮ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಮಠಾಧೀಶರು, ರೈತರು, ನಾಯಕರು, ನೂರಾರು ಭಕ್ತರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಚಿನ್ನದ ಪದಕ ಪಡೆದಂತಹ ಜ್ಯೋತಿರ್ಲಿಂಗ ಹೊನಕಟ್ಟಿ ಜಾನಪದ ಗೀತೆ ಹಾಡಿದರು. ವಿಜಯಪುರದ ಚಾಣಕ್ಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಟಿ.ಮೇರವಾಡೆ ಸ್ವಾಗತಿಸಿದರು, ಸಂಗಮೇಶ ಬಾಬು ನಿರೂಪಿಸಿದರು.

