ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ | ೫ ನೇ ಗೋಷ್ಠಿ `ಮಾತೃ ಭಕ್ತಿ’ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯೆಗೆ ಸಮನಾದಂತಹ ಮಿತ್ರನಿಲ್ಲ, ರೋಗಕ್ಕೆ ಸಮನಾದ ಶತ್ರುವಿಲ್ಲ, ಧರ್ಮಕ್ಕೆ ಸಮನಾದ ಬಂಧುವಿಲ್ಲ ಅಂತೆಯೇ ಮಾತೆಗೆ ಸಮನಾದಂತಹ ದೇವರು ಇಲ್ಲ ಎನ್ನುವ ಸಾಲುಗಳಿಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿ ಅವರು ಜೀವ ತುಂಬಿದ್ದಾರೆ ಎಂದು ಖ್ಯಾತ ಹೃದಯ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ೫ ನೇ ಗೋಷ್ಠಿ `ಮಾತೃ ಭಕ್ತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂತಃಕರಣ, ಮೃದು ಸ್ವಭಾವವನ್ನು ಹೊಂದಿದ್ದ ಸಿದ್ದೇಶ್ವರ ಅಪ್ಪಾವರು ಮಾತೃ ಹೃದಯದವರಾಗಿದ್ದರು. ಮಣ್ಣಿನ ಮುದ್ದೆಯಾಗಿರುವ ಮಗುವನ್ನು ರೂಪ ನೀಡಿ ಬೆಳೆಸುವವಳು ತಾಯಿ. ಇಂದು ಆಂಗ್ಲ ಸಂಸ್ಕೃತಿ ಒಲವಿನಿಂದ ಮಕ್ಕಳಿಗೆ ಮಮ್ಮಿ ಎಂದು ಕರೆಯವುದನ್ನು ಕಲಿಸುತ್ತಿದ್ದೇವೆ. ಮಮ್ಮಿ ಎಂದರೆ ಸತ್ತ ಹೆಣ, ನಾವು ಸತ್ತ ಹೆಣ ಎಂದು ಕರೆಯಿಸಿಕೊಳ್ಳುತ್ತಿದ್ದೆವೆ. ಅದರ ಬದಲು ಮಕ್ಕಳಿಗೆ ಭಾರತೀಯ ಸಂಸ್ಕೃತಿಯಂತೆ ಅವ್ವ-ಅಪ್ಪಾ ಎಂದು ಕರೆಯುವದನ್ನು ಕಲಿಸಬೇಕು. ಮಕ್ಕಳು ಹೆಣ್ಣಾಗಲಿ ಗಂಡಾಗಲಿ, ಅವರನ್ನು ಓದಿಸಬೇಕು. ಅವರನ್ನು ಮಾರ್ಕ್ಸ ತೆಗೆಯುವ ಮಶೀನ್ ಮಾಡದೆ ಅವರಲ್ಲಿ ಜ್ಞಾನ, ಸಂಸ್ಕೃತಿ ಹಾಗೂ ಉತ್ತಮ ಗುಣಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ತಾಳ್ಮೆ, ಆತ್ಮವಿಶ್ವಾಸವನ್ನು ಮೂಡಿಸಬೇಕು. ಮಗುವಿನ ಮೊದಲ ಹಾಸಿಗೆ ತಾಯಿಯ ಗರ್ಭ. ಮಗುವಿನ ಮೊದಲ ಗುರು, ಮೊದಲ ವೈದ್ಯೆ ತಾಯಿ, ಮಾತು ಕಲಿಸುವವಳು ಅವಳೆ, ಅಂತಹ ಹೆಣ್ಣನ್ನು ನಾವು ಸಮಾಜದ ಕಣ್ಣು ಎಂದು ಕರೆದರೆ ಜಗತ್ತು ಅತ್ಯಂತ ಸುಂದರವಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ೨೧ ನೇ ಶತಮಾನದಲ್ಲಿ ನಡೆದಾಡುವ, ಮಾತನಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ಕಂಡಿದ್ದೇವೆ. ನಾವು ಅದೃಷ್ಟವಂತರು. ಇಂದು ತಾಯಂದಿಯರ ಮೇಲೆ ಅತೀ ದೊಡ್ಡ ಜವಾಬ್ದಾರಿ ಇದೆ. ಅನೇಕ ರಾಷ್ಟçಗಳು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ನಮ್ಮ ದೇಶದಲ್ಲಿ ಇನ್ನೂ ಸಂಸ್ಕೃತಿ ಉಳಿದಿದೆ ಎಂದರೆ ಅದು ತಾಯಂದಿರಿಂದ ಎಂದು ಸಿದ್ಧೇಶ್ವರ ಅಪ್ಪನವರು ನಮಗೆ ಕಲಿಸಿದ್ದಾರೆ. ಮಕ್ಕಳು ನಮ್ಮನ್ನೇ ಅನುಕರಣೆ ಮಾಡುತ್ತೇವೆ. ಹಾಗಾಗಿ ನಾವು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಶ್ರೀ ಸಿದ್ಧೇಶ್ವರ ಅಪ್ಪನವರು ದೀಪ ಆರಿಸಿ ಹುಟ್ಟುಹಬ್ಬ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ, ದೀಪ ಬೆಳಗಿಸುವ ಸಂಸ್ಕೃತಿ ಎಂದು ಹೇಳಿದ್ದಾರೆ ಅವರ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಬೀದರನ ಮತೋಶ್ರೀ ಗಂಗಾಂಬಿಕಾ ಮಾತಾ ಅಮ್ಮನವರು ಮಾತನಾಡಿ, ಸಕಲರಿಗೂ ಲೇಸನ್ನು ಬಯಸುವ ಸಂಸ್ಕೃತಿ ಯಾವುದಾದರೂ ಇದ್ದರೆ ಅದು ಶರಣ ಸಂಸ್ಕೃತಿ. ಅದರಂತೆ ಮಾತೆಗೆ ಸರ್ವ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ತಾಯಿ ಸ್ವರ್ಗ ಇದ್ದಂತೆ, ಭೂ ಮಾತಾ, ತಾಯಿ ಮಾತಾ, ಗೋ ಮಾತಾ, ಜಲ ಮಾತಾ, ಭಾಷಾ ಮಾತಾ ಇವೆಲ್ಲವೂ ಮನುಷ್ಯನು ಬೆಳೆಯಲು ಪೋಷಕವಾಗಿರುವ ಅಂಶಗಳು. ನಾವು ಇಂದು ಭೂಮಿಯನ್ನು ಅಗೆದು ಹಾಕಿ ಪ್ರಕೃತಿಗೆ ಹಾನಿ ಮಾಡುತ್ತಿದ್ದೇವೆ. ಭೂಮಿ ರಕ್ಷಣೆ ಮಾಡಲು ನಾವು ಗೀಡಗಳನ್ನು ಹಚ್ಚಬೇಕು ಎಂದು ಶ್ರೀ ಸಿದ್ಧೇಶ್ವರ ಅಪ್ಪಾಜಿಯವರು ನಮಗೆ ತಿಳಿಸಿಕೊಟ್ಟಿದ್ದಾರೆ. ಗಂಗಾ ಮಾತೆ ಅದೇಷ್ಟೋ ಕೊಳಕನ್ನು ತೊಳೆದು ಹಾಕಿದ್ದಾಳೆ. ಭಾಷೆಯನ್ನು ನಾವು ಕಾಪಾಡಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.
ಬುರುಣಾಪುರದ ಯೋಗೇಶ್ವರಿ ಮಾತಾಜಿ ಮಾತನಾಡಿ, ಪ್ರಕೃತಿಯಲ್ಲಿ ಗಂಡು-ಹೆಣ್ಣು ಬೇಧವಿಲ್ಲ. ಆದರೆ ಮಕ್ಕಳು ಹೆಚ್ಚು ಮಾತೆಯರ ಕೈಯಲ್ಲಿ ಇರುತ್ತವೆ. ಅವರಿಗೆ ಸಂಸ್ಕಾರ, ಶಿಕ್ಷಣ, ಆಚಾರ-ವಿಚಾರಗಳನ್ನು ನಾವೇ ಕಲಿಸಬೇಕು. ತಾಯಿ ಭಕ್ತಿಯಿಂದ ದೇಶಕ್ಕೆ ಪುಣ್ಯಾತ್ಮರನ್ನು ಕೊಡಲು ಸಾಧ್ಯ. ಇವತ್ತು ದೇವರು ಎಲ್ಲಿ ಇದ್ದಾನೆ ಎಂದರೆ ಅದು ತಾಯಿಯಲ್ಲಿ ಇದ್ದಾನೆ ಎಂದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಮಾತನಾಡಿ, ಶ್ರೀ ಸಿದ್ಧೇಶ್ವರ ಅಪ್ಪಾಜಿಯವರು ತಾಯಿಯಲ್ಲಿಯೇ ದೇವರನ್ನು ಕಾಣು ಎಂದಿದ್ದಾರೆ ಇದರ ಅರ್ಥ ತಾಯಿ ಮೊದಲು ಎನ್ನುವುದನ್ನು ಅಪ್ಪಾವರು ತಿಳಿಸಿಕೊಟ್ಟಿದ್ದಾರೆ. ನಾವು ಅಪ್ಪಾಜಿಅವರ ಮಾತನ್ನು ನಾವು ಪಾಲಿಸಬೇಕು. ನಮ್ಮ ಸಂಸ್ಕೃತಿ ಕನ್ನಡ ಭಾಷೆಯಲ್ಲಿದೆ. ಅಮ್ಮಾ ಎನ್ನುವ ಪದ ಕನ್ನಡ ಭಾಷೆಯಲ್ಲಿ ಅಡಗಿದೆ ಹಾಗಾಗಿ ನಮ್ಮ ಮನೆಯನ್ನು ಕನ್ನಡಮಯವಾಗಿಸಬೇಕು ಎಂದು ಹೇಳಿದರು.
ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಮಾತನಾಡಿ, ಶ್ರೀ ಸಿದ್ಧೇಶ್ವರ ಅಪ್ಪಾವರ ಪ್ರವಚನಗಳನ್ನು ಕೇಳಿ ಪ್ರಭಾವಿತಳಾಗಿ ನಾನು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಹಿಂದುಳಿದ ಜಿಲ್ಲೆಯಿಂದ ಬಂದು ಕ್ರಿಕೆಟ್‌ನಲ್ಲಿ ರಾಷ್ಟçವನ್ನು ಪ್ರತಿನಿಧಿಸುತ್ತಿದ್ದೇನೆ. ಇದು ಈ ಆಶ್ರಮದ ಶಕ್ತಿ ಎಂದು ಹೇಳಿದರು.
ಶೈಲಜಾ ಬಸನಗೌಡ ಪಾಟೀಲ ಮಾತನಾಡಿ, ಮಾತೃ ಶಕ್ತಿ ಎಲ್ಲ ಶಕ್ತಿಗಿಂತಲೂ ದೊಡ್ಡದು. ಮಾತೆಯರನ್ನು ಗೌರವದಿಂದ ಕಾಣಬೇಕು ಎಂದರು.
ಭಾಗ್ಯಶ್ರೀ ಶಿವಾನಂದ ಪಾಟೀಲ ಮಾತನಾಡಿ, ಸಮಾಜದ ನಿರ್ಮಾಣದಲ್ಲಿ ಮಾತೆಯರ ಮಾತ್ರ ಬಹಳ ದೊಡ್ಡದು. ಇಡೀ ದಿನ ತಾಯಿ ಕೆಲಸ ಮಾಡಿದರೂ ಅವಳಿಗೆ ಧಣಿವಾಗುವುದಿಲ್ಲ. ಮಕ್ಕಳನ್ನು ನೋಡಿಕೊಳ್ಳುವಲ್ಲಿ ತಾಯಿ ಯಾವುದೇ ಕಷ್ಟ ಬಂದರು ಸಹಿಸುತ್ತಾಳೆ. ಮಕ್ಕಳು ಭವಿಷ್ಯ ರೂಪಿಸುವಲ್ಲಿ ತಾಯಿ ಜವಾಬ್ದಾರಿ ಬಹಳ ದೊಡ್ಡದು. ನಾವು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಅವರಲ್ಲಿ ಜ್ಞಾನ ಸದ್ಗುಣಗಳನ್ನು ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಶರಣು ಸಬರದ, ಆಶ್ರಮದ ಭಕ್ತರು, ಸ್ವಾಮೀಜಿಗಳು ಉಪಸ್ಥಿತರಿದ್ದರು.

